ಪುನೀತ್‌ ರಾಜ್‌ಕುಮಾರ್‌ಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆ

ಬೆಂಗಳೂರು: ನಟ ದಿವಂಗತ ಪುನೀತ್‌ ರಾಜ್‌ಕುಮಾರ್‌ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಘೋಷಿಸಿದರು.

ಅರಮನೆ ಮೈದಾನದ ಗಾಯತ್ರಿ ವಿಹಾರ್‌ನಲ್ಲಿ ಪುನೀತ್‌ ರಾಜ್‌ಕುಮಾರ್‌ ಸ್ಮರಣಾರ್ಥ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಂಗಳವಾರ ಆಯೋಜಿಸಿದ್ದ ‘ಪುನೀತ ನಮನ’ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಪ್ಪು ಚಿರಸ್ಥಾಯಿ ಆಗಿರಬೇಕು ಎನ್ನುವ ಜನರ ಅಭಿಲಾಷೆಯೇ ಸರ್ಕಾರದ ಆಶಯ. ಪುನೀತ್‌ ಸಮಾಧಿಯನ್ನು ಡಾ.ರಾಜ್‌ಕುಮಾರ್‌ ಅವರ ಸಮಾಧಿಯಂತೇ ಅಭಿವೃದ್ಧಿಗೊಳಿಸಲಾಗುವುದು. ಪುನೀತ್‌ ಅವರ ಹೆಸರನ್ನು ರಾಷ್ಟ್ರ ಮಟ್ಟದ ಪ್ರಶಸ್ತಿಗಳಿಗೆ ಶಿಫಾರಸು ಮಾಡಬೇಕೆಂಬ ಸಲಹೆಯೂ ಸರ್ಕಾರದ ಗಮನದಲ್ಲಿದೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಆ ನಿರ್ಣಯಗಳನ್ನೂ ತೆಗೆದುಕೊಳ್ಳುತ್ತೇವೆ ಎಂದರು.