ಉಡುಪಿ: ಕಾರ್ಕಳದ ಟಿಎಂಎ ಪೈ ಆಸ್ಪತ್ರೆಯ ಮೇಲೆ ತುಳು ಮಾತನಾಡಿದಕ್ಕೆ ಚಿಕಿತ್ಸೆ ನೀಡಲು ನಿರಾಕರಿಸಿದ ಆರೋಪ ಕೇಳಿಬಂದಿದೆ.
ಈ ಬಗ್ಗೆ ಸುಮಂತ್ ಎಂಬವರು ತಮ್ಮ ಟ್ವೀಟರ್ ಖಾತೆಯಲ್ಲಿ ಆರೋಪ ಮಾಡಿದ್ದಾರೆ. ಇಂದು ನಾನು ಕಾರ್ಕಳದ ಟಿಎಂಎ ಪೈ ಆಸ್ಪತ್ರೆಗೆ ಭೇಟಿ ನೀಡಿದ್ದೆ. ಅಲ್ಲಿ ಮಣಿಪಾಲ ಆಸ್ಪತ್ರೆಯ ವೈದ್ಯರಾದ ಅಶ್ವಲ್ ಅವರು, ಕನ್ನಡದಲ್ಲಿ ಮಾತನಾಡಿದರೆ ಮಾತ್ರ ಚಿಕಿತ್ಸೆ ನೀಡುತ್ತೇನೆ. ತುಳುವಿನಲ್ಲಿ ಮಾತನಾಡಿದರೆ ಚಿಕಿತ್ಸೆ ನೀಡುವುದಿಲ್ಲ ಎಂದು ಹೇಳಿದ್ದರು ಎಂದು ಬರೆದುಕೊಂಡಿದ್ದಾರೆ.
ಸುಮಂತ್ ಅವರ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಘಟನೆಗೆ ಸಂಬಂಧಿಸಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಕಾರ್ಕಳದ ಟಿಎಂಎ ಪೈ ಆಸ್ಪತ್ರೆ, ಸುಮಂತ್ ಆರೋಪಕ್ಕೆ ಸ್ಪಷ್ಟನೆ ನೀಡಿದೆ. ಮಾಹೆಯ ಆಡಳಿತಕ್ಕೊಳಪಟ್ಟ ಆಸ್ಪತ್ರೆಗಳಲ್ಲಿ ಇಂತಹ ನೀತಿಯಿಲ್ಲ. ತುಳು ಸೇರಿದಂತೆ ಎಲ್ಲಾ ಭಾಷೆಗಳನ್ನು ಮಾತನಾಡುವ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತದೆ ಎಂದು ತಿಳಿಸಿದೆ. ಆ ಮೂಲಕ ಸುಮಂತ್ ಆರೋಪವನ್ನು ತಳ್ಳಿಹಾಕಿದೆ.