ಉಡುಪಿ: ಮಕ್ಕಳ ಬೆಳವಣಿಗೆಗೆ ಪೂರಕವಾಗಿ ಸಹಕಾರ, ರಕ್ಷಣೆ ಜೊತೆಗೆ ಉತ್ತಮ ಶಿಕ್ಷಣ ದೊರಕಿಸುವ ಹಾಗೂ ಜಾಗತಿಕ ಮಟ್ಟದಲ್ಲಿ ಉತ್ತಮ ವೇದಿಕೆ ಕಲ್ಪಿಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಲೋಕೇಶ್ ಸಿ ಹೇಳಿದರು.
ಅವರು ಶುಕ್ರವಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ಭಾರತ ಪ್ರಪ್ರಥಮ ಪ್ರಧಾನ ಮಂತ್ರಿಗಳಾದ ಪಂಡಿತ್ ಜವಾಹರಲಾಲ್
ನೆಹರು ಜನ್ಮ ದಿನಾಚರಣೆ ಅಂಗವಾಗಿ ಕಾರ್ಕಳದ ಪೆರ್ವಾಜೆ ಸುಂದರ ಪುರಾಣಿಕ ಸ್ಮಾರಕ ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ಮಕ್ಕಳ ದಿನಾಚರಣೆ ಹಾಗೂ ಪೋಷಕ ಶಿಕ್ಷಕರ ಮಹಾಸಭೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಮಕ್ಕಳು ದೇಶದ ಆಸ್ತಿಯಾಗಿದ್ದು, ಮಕ್ಕಳನ್ನು ಜಾಗತಿಕ ಮಟ್ಟದಲ್ಲಿ ಒಳ್ಳೆಯ ಪ್ರಜೆಗಳನ್ನಾಗಿ ಮಾಡುವ ಹೊಣೆ ಶಿಕ್ಷಕರ ಹಾಗೂ ಪೋಷಕರ
ಮೇಲೆ ಇದೆ ಎಂದ ಅವರು, ವಿದ್ಯಾರ್ಥಿ ಜೀವನದಲ್ಲಿ ಪಠ್ಯ ಹಾಗೂ ಸೃಜನಶೀಲ ಪಠ್ಯೇತರ ಚಟುವಟಿಕೆಗಳ ಕಡೆ ಹೆಚ್ಚಿನ ಗಮನಹರಿಸಿ, ಉತ್ತಮ ಪ್ರಜೆಗಳಾಗಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಮಕ್ಕಳ ಶೈಕ್ಷಣಿಕ ಪ್ರಗತಿ, ಮಕ್ಕಳ ರಕ್ಷಣೆ ಮತ್ತು 10ನೇ ತರಗತಿಯ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃಧಿ ಸಾಧಿಸುವ ಕುರಿತು ಮಾಹಿತಿ ನೀಡಿದ
ಅವರು, ಸರಕಾರದಿಂದ ಲಭ್ಯವಿರುವ ಸವಲತ್ತುಗಳ ವಿವರಗಳನ್ನು ಪೋಷಕರಿಗೆ ತಿಳಿಸಿ, ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.

ಮಕ್ಕಳಲ್ಲಿ ಬಡವ ಶ್ರೀಮಂತನೆಂದು ಯಾವುದೇ ತಾರತಮ್ಯ ಬರಬಾರದು. ನಾವೆಲ್ಲ ಸಮಾನರು ಎಂಬ ಭಾವನೆ ಮೂಡಬೇಕು. ಆ ನಿಟ್ಟಿನಲ್ಲಿ ಸರ್ಕಾರಿ ಶಾಲೆಯ ಮಕ್ಕಳು ಚೆನ್ನಾಗಿ ಓದಿ ಉನ್ನತ ಮಟ್ಟಕ್ಕೆ ತಲುಪಬೇಕು. ಹಾಗಾಗಿ ಸರ್ಕಾರ ಉಚಿತ ಪುಸ್ತಕ, ಯೂನಿಫಾರ್ಮ್, ಶೂ, ಕಂಪಾಸ್, ನೀಡುವ ಮೂಲಕ ಪ್ರೋತ್ಸಾಹ ನೀಡುತ್ತಿದೆ ಎಂದರು.
ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ ವೀಣಾ ಭಂಡಾರಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿಕ್ಷೇತ್ರ ಶಿಕ್ಷಣಾಧಿಕಾರಿ ಗಿರಿಜಮ್ಮ, ಎಸ್.ಡಿ.ಎಂ.ಸಿ ಸದಸ್ಯರಾದ ಪ್ರಕಾಶ್ ರಾವ್, ಪ್ರದೀಪ್ ರಾಣೆ, ವನಿತ ಆಚಾರ್ಯ,
ರಾಘವೇಂದ್ರ ಆಚಾರ್ಯ, ಪೋಷಕರುಗಳು, ವಿದ್ಯಾರ್ಥಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.ಮುಖ್ಯ ಶಿಕ್ಷಕರಾದ ದಿವಾಕರ ಪಟ್ಲ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿ, ಸಹಶಿಕ್ಷಕ ಹರಿಶ್ಚಂದ್ರ ಬಾಯಿರಿ ನಿರೂಪಿಸಿ, ಲಲಿತ ವಂದಿಸಿದರು.



















