ಕಾರ್ಕಳ: ಹಾರೆಯಿಂದ ಹೊಡೆದು ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿದ ಘಟನೆ ಕಾರ್ಕಳದ ಮಾಳ ಗ್ರಾಮದ ಮುಕ್ಕಾಯಿ ಎಂಬಲ್ಲಿ ನಡೆದಿದೆ.
ಕೊಲೆಯಾದ ವ್ಯಕ್ತಿಯನ್ನು ಮಿಯ್ಯಾರು ಗ್ರಾಮದ ಬೋರ್ಕಟ್ಟೆ ನಿವಾಸಿ ಹರೀಶ್ ಪೂಜಾರಿ (42) ಎಂದು ಗುರುತಿಸಲಾಗಿದೆ. ಗುರುವ ಕೊಲೆಗೈದ ಆರೋಪಿ. ಹರೀಶ್ ಪೂಜಾರಿ ಹಾಗೂ ಗುರುವ ಇಬ್ಬರೂ ಕಳೆದ ಏಳು ತಿಂಗಳಿನಿಂದ ಮಾಳದ ರೀತಾ ಎಂಬ ಮಹಿಳೆಯ ಮನೆಯಲ್ಲಿ ವಾಸವಾಗಿದ್ದರು ಎನ್ನಲಾಗಿದೆ.
ಹರೀಶ್ ವಿದ್ಯುತ್ ಕಂಬ ಹಾಕುವ ಕೆಲಸ ಮಾಡಿಕೊಂಡಿದ್ದರೆ, ರೀತಾ ಹಾಗೂ ಗುರುವ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಮೇ 23ರಂದು ಕುಡಿದ ಮತ್ತಿನಲ್ಲಿ ಹರೀಶ್ ಹಾಗೂ ಗುರುವ ಇಬ್ಬರೂ ಜಗಳ ಮಾಡಿಕೊಂಡಿದ್ದು, ಜಗಳ ವಿಕೋಪಕ್ಕೆ ತಿರುಗಿದೆ.
ಸಿಟ್ಟಿನ ಭರದಲ್ಲಿ ಗುರುವ ಅಲ್ಲೇ ಇದ್ದ ಹಾರೆಯಿಂದ ಹರೀಶ್ ತಲೆಗೆ ಹೊಡೆದಿದ್ದು, ಗಂಭೀರ ಗಾಯಗೊಂಡ ಹರೀಶ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.