ಕಾರ್ಕಳ: ಕೆರೆಯಲ್ಲಿ ಮುಳುಗಿ ತಾಯಿ-ಮಗು ಮೃತ್ಯು

ಕಾರ್ಕಳ: ಆಕಸ್ಮಿಕವಾಗಿ ಕಾಲುಜಾರಿ ಕೆರೆಗೆ ಬಿದ್ದು ತಾಯಿಮಗು ಮೃತಪಟ್ಟ ದಾರುಣ ಘಟನೆ ಕಾರ್ಕಳ ತಾಲೂಕಿನ ಕೆರ್ವಾಶೆ ಗ್ರಾಮದಲ್ಲಿ ನಡೆದಿದೆ.

ಮೃತರನ್ನು ಕಡ್ಪಾಲ್ ನಿವಾಸಿ ಸೌಮ್ಯ (27) ಹಾಗೂ ಅವರ ಮೂರು ವರ್ಷ ಪ್ರಾಯದ ಮಗ ಆರೂಷ್ (3) ಎಂದು ಗುರುತಿಸಲಾಗಿದೆ.

ಸೌಮ್ಯ ಅವರು ಜುಲೈ 31ರಂದು ಟೈಲರಿಂಗ್ ಕಲಿಯಲು ಮಗುವಿನೊಂದಿಗೆ ಹೋಗಿದ್ದರು. ಆದರೆ, ಸಂಜೆಯಾದರೂ ಮನೆಗೆ ವಾಪಾಸ್‌ ಬಾರದಿದ್ದಾಗ ಸೌಮ್ಯಳ ತಂಗಿ ಸರಿತಾ ಹುಡುಕಾಡಿದ್ದಾರೆ. ಈ ವೇಳೆ ಮಡಿವಾಳ ಕಟ್ಟೆಯ ಕೆರೆಯ ನೀರಿನಲ್ಲಿ ಆರೂಷ್ ಧರಿಸಿದ್ದ ಚಪ್ಪಲಿ, ಸೌಮ್ಯ ತೆಗೆದುಕೊಂಡು ಹೋಗಿದ್ದ ಪ್ಲಾಸ್ಟಿಕ್ ಚೀಲ ಕಾಣಿಸಿಕೊಂಡಿದೆ.

ಇದರಿಂದ ಗಾಬರಿಗೊಂಡ ಸರಿತಾ ಅವರು ಬೊಬ್ಬೆ ಹೊಡೆದರು. ತಕ್ಷಣವೇ ಅಲ್ಲಿಗೆ ಧಾವಿಸಿದ ಸ್ಥಳೀಯರಾದ ಮಯ್ಯದ್ದಿ ಹಾಗೂ ಭರತ್ ಕೆರೆ ನೀರಲ್ಲಿ ಮುಳುಗಿ ಸೌಮ್ಯ ಹಾಗೂ ಆರೂಷ್ ಮೃತದೇಹವನ್ನು ಮೇಲೆತ್ತಿದ್ದಾರೆ. ಈ ಬಗ್ಗೆ ಅಜೆಕಾರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.