ಉಡುಪಿ: 13 ವರ್ಷಗಳಿಂದ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡಿದ್ದಕ್ಕೆ ಮನೆಯವರಿಗೆ ಹೆದರಿ ನಿಗೂಢವಾಗಿ ನಾಪತ್ತೆಯಾಗಿದ್ದ ಕಾರ್ಕಳದ ಯುವಕನೋರ್ವನನ್ನು ಕೊನೆಗೂ ಪೊಲೀಸರು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
2012ರಲ್ಲಿ ಕಾಣೆಯಾಗಿದ್ದ ಅನಂತ ಕೃಷ್ಣ ಪ್ರಭು (29) ಅವರನ್ನು ಇದೀಗ ಬೆಂಗಳೂರು ನಗರದಲ್ಲಿ ಪೊಲೀಸರು ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದಾರೆ.
ಇಲ್ಲಿನ ನಿವಾಸಿ ಪ್ರಭಾಕರ ಪ್ರಭು ಅವರ ಪುತ್ರ ಅನಂತ ಕೃಷ್ಣ ಪ್ರಭು (ಆಗ 16 ವರ್ಷ) ವಿದ್ಯಾವರ್ಧಕ ಪದವಿ ಪೂರ್ವ ಕಾಲೇಜು, ಮುಂಡ್ಕೂರು ಅಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದರು. 2012 ಡಿಸೆಂಬರ್ ತಿಂಗಳಲ್ಲಿ ದೇವಸ್ಥಾನಕ್ಕೆ ಹೋಗಿ ಬರುತ್ತೇನೆ ಎಂದು ಹೇಳಿ ಮನೆಯಿಂದ ಹೊರಟು ಹೋದ ಅನಂತಕೃಷ್ಣ ಪ್ರಭು ಬಳಿಕ ಮನೆಗೆ ವಾಪಸ್ಸಾಗದೆ ನಿಗೂಢವಾಗಿ ನಾಪತ್ತೆಯಾಗಿದ್ದರು. ಈ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಅನಂತ ಕೃಷ್ಣಮೂರ್ತಿ ಪ್ರಥಮ ಪಿಯುಸಿ ಪರೀಕ್ಷೆಯೊಂದರಲ್ಲಿ ಅನುತ್ತೀರ್ಣನಾಗಿದ್ದರಿಂದ ಕಾಲೇಜಿನಲ್ಲಿ ಪೋಷಕರನ್ನು ಕರೆದುಕೊಂಡು ಬರುವಂತೆ ಸೂಚಿಸಿದ್ದರು. ಇದರಿಂದ ಭಯಗೊಂಡ ಅನಂತ ಕೃಷ್ಣಮೂರ್ತಿ ಮನೆಯಲ್ಲಿ ವಿಷಯ ಪ್ರಸ್ತಾಪಿಸದೆ, ಮನೆಯವರಿಗೆ ಹೆದರಿ ಬೆಂಗಳೂರಿಗೆ ತೆರಳಿದ್ದನು. ಬೆಂಗಳೂರಿನಲ್ಲಿ ಅವರಿವರ ಸಹಕಾರದಿಂದ ಕೆಲಸ ಮಾಡುತ್ತಾ ತನ್ನ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿಕೊಂಡು ಸದ್ಯ ಯಶಸ್ವಿ ಇಂಟೀರಿಯರ್ ಡಿಸೈನರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾನೆ.

ಅನಂತ ಕೃಷ್ಣ ಪೂರ್ತಿ 13 ವರ್ಷಗಳಿಂದ ಬೆಂಗಳೂರಿನಲ್ಲಿದ್ದು, ಪ್ರಮಾಣಿಕವಾಗಿ ದುಡಿದು ದುಡ್ಡು ಮಾಡಿಕೊಂಡು ಸ್ವಂತ ಫ್ಲ್ಯಾಟ್, ಹೊಚ್ಚ ಹೊಸ ಕಾರು ಖರೀದಿಸಿ ಆ ಕಾರಿನಲ್ಲಿಯೇ ಮನೆಗೆ ಬಂದು ಮನೆಯವರಿಗೆ ಅಚ್ಚರಿಪಡಿಸುವ ಯೋಚನೆಯಲ್ಲಿದ್ದರು ಎನ್ನುವುದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.


















