ಕಾಪು: ಎರಡು ಪ್ರತ್ಯೇಕ ವಿದ್ಯಾರ್ಥಿ ಗುಂಪುಗಳ ಮಧ್ಯೆ ಮಾತಿನ ಚಕಮಕಿ ನಡೆದು, ಅದು ಕೈಕೈಮಿಲಾಸುವ ಹಂತಕ್ಕೆ ತಲುಪಿದ ಘಟನೆ ಕಾಪು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂದು ಮಧ್ಯಾಹ್ನ ನಡೆದಿದೆ.
ಹಿಂದೂ ಯುವತಿಯೊಂದಿಗೆ ಮುಸ್ಲಿಂ ಯುವಕನೋರ್ವ ಮಾತನಾಡಿದ ಎಂಬ ಕಾರಣಕ್ಕೆ ವಿದ್ಯಾರ್ಥಿಗಳ ತಂಡ ಹಲ್ಲೆ ನಡೆಸಿದೆ ಎನ್ನಲಾಗಿದೆ. ಇದರಿಂದ ಸಿಟ್ಟಿಗೆದ್ದ ಮುಸ್ಲಿಮ್ ಯುವಕ ತನ್ನ ಸ್ನೇಹಿತರಿಗೆ ವಿಷಯ ಮುಟ್ಟಿಸಿ ಅವರನ್ನು ಕಾಲೇಜಿಗೆ ಬರುವಂತೆ ತಿಳಿಸಿದ್ದಾನೆ. ಹೀಗಾಗಿ ಕಾಲೇಜಿಗೆ ಹೊರಗಿನ ತಂಡವೊಂದು ಬಂದಿದ್ದು, ಇದು ಇತರ ವಿದ್ಯಾರ್ಥಿಗಳ ಆಕ್ರೊಶಕ್ಕೆ ಕಾರಣವಾಗಿದೆ. ಇದರಿಂದ ಕಾಲೇಜಿನ ಆವರಣದಲ್ಲಿ ಕೆಲಕಾಲ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ ಎಂದು ತಿಳಿದುಬಂದಿದೆ.
ವಿದ್ಯಾರ್ಥಿಗಳ ಗಲಾಟೆ ಕೋಮು ಬಣ್ಣ ಪಡೆಯುತ್ತಿದ್ದಂತೆಯೇ ಕಾಲೇಜಿನ ಪ್ರಾಂಶುಪಾಲರು ಕಾಪು ಪೊಲೀಸರಿಗೆ ಮಾಹಿತಿ ನೀಡಿದ್ದರು. ಕಾಪು ಎಸ್ಐ ರಾಘವೇಂದ್ರ ಸಿ. ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ, ಪರಿಸ್ಥಿತಿಯನ್ನು ಹತೋಟಿಗೆ ತಂದರು. ಬಳಿಕ ಪೊಲೀಸರು ಹೊರಗಿನಿಂದ ಬಂದ ತಂಡದ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಹೊಡೆದಾಟಕ್ಕೆ ಯತ್ನಿಸಿದ ವಿದ್ಯಾರ್ಥಿಗಳನ್ನೂ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಮಾತುಕತೆಯ ಮೂಲಕ ಎರಡು ಗುಂಪುಗಳ ವಿದ್ಯಾರ್ಥಿಗಳನ್ನು ಸಮಾಧಾನಪಡಿಸಿದ್ದಾರೆ ಎನ್ನಲಾಗಿದೆ.