ಕಡಾರಿ ರವೀಂದ್ರ ಪ್ರಭು ಅವರಿಗೆ ‘ಸಹಕಾರ ರತ್ನ’ ಪ್ರಶಸ್ತಿ

ಕಾರ್ಕಳ: ರಾಜಾಪುರ ಸಾರಸ್ವತ ಕ್ರೆಡಿಟ್ ಕೋ–ಆಪರೇಟಿವ್‌ ಸೊಸೈಟಿಯ ಅಧ್ಯಕ್ಷರಾದ ಮಾಳ ಗ್ರಾಮದ ಕಡಾರಿ ರವೀಂದ್ರ ಪ್ರಭು ಅವರು ಸಹಕಾರ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕಳೆದ ಮೂರು ದಶಕಗಳಿಂದ ಸಹಕಾರಿ ಚಳವಳಿಯಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಇವರಿಗೆ ನವೆಂಬರ್‌ 14ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

1996ರಲ್ಲಿ ಪ್ರಾರಂಭವಾದ ರಾಜಾಪುರ ಸಾರಸ್ವತ ಕ್ರೆಡಿಟ್ ಸೊಸೈಟಿಯಲ್ಲಿ ನಿರ್ದೇಶಕರಾಗಿ ಸೇವೆ ಆರಂಭಿಸಿದ ರವೀಂದ್ರ ಪ್ರಭು ಅವರು ಬಳಿಕ ಉಪಾಧ್ಯಕ್ಷ ಹಾಗೂ ಅಧ್ಯಕ್ಷರಾಗಿ ಸಂಘಟನೆಯನ್ನು ಮುಂದಾಳತ್ವ ನೀಡಿ ಬಲಿಷ್ಠ ಸಹಕಾರಿ ಸಂಸ್ಥೆಯನ್ನಾಗಿ ಬೆಳೆಸಿದ್ದಾರೆ. ಅವರ ನೇತೃತ್ವದಲ್ಲಿ ಸಂಸ್ಥೆ ಐದು ಬಾರಿ ರಾಜ್ಯದ ಅತ್ಯುತ್ತಮ ಸಹಕಾರಿ ಸಂಸ್ಥೆ ಪ್ರಶಸ್ತಿಯನ್ನು ಗಳಿಸಿದ್ದು, 2017ರಲ್ಲಿ ಅತ್ಯುತ್ತಮ ಸಹಕಾರಿ ಪ್ರಶಸ್ತಿ ಹಾಗೂ ಕೆನರಾ ಶ್ರೇಷ್ಠ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಇವರಿಗೆ ಸಂದಿವೆ.

ಸದ್ಭಾವನಾ ನಗರದಲ್ಲಿ ಪ್ರಿಂಟಿಂಗ್ ಉದ್ಯಮವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿರುವ ರವೀಂದ್ರ ಪ್ರಭು ಅವರು ರಾಜಾಪುರ ಸಾರಸ್ವತ ಬ್ರಾಹ್ಮಣ ಸಮಾಜದ ಯುವ ಸಂಘಟನೆಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದು, ಸಂಘಟನೆಯಲ್ಲಿ ಹೊಸ ಚೈತನ್ಯ ತುಂಬಿದ್ದಾರೆ. ಸಾಮಾಜಿಕ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿಯೂ ಅವರು ಶ್ರದ್ಧೆ, ಪ್ರಾಮಾಣಿಕತೆ ಮತ್ತು ಸೇವಾಭಾವದಿಂದ ಹೆಸರಾಗಿದ್ದಾರೆ.

ಹಿರ್ಗಾನ ಶ್ರೀ ಆದಿಶಕ್ತಿ ಮಹಾಲಕ್ಷ್ಮೀ ದೇವಿಯ ಭಕ್ತರಾಗಿರುವ ರವೀಂದ್ರ ಪ್ರಭು ಅವರು ದೇವಳದ ಸಹಮೊತ್ತೇಸರರಾಗಿ ಶತಮಾನೋತ್ಸವದ ಸಂದರ್ಭದಲ್ಲಿ ನಡೆದ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶ ಮಹೋತ್ಸವ ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರ ನೇತೃತ್ವದಲ್ಲಿ ದೇವಳದ ಸರ್ವಾಂಗೀಣ ಅಭಿವೃದ್ಧಿ ನಡೆದಿದ್ದು, ಋಕ್ಸಂಹಿತಾ ಯಾಗ ಸೇರಿದಂತೆ ವಿಶಿಷ್ಟ ಮಂಗಳಕಾರ್ಯಗಳು ಯಶಸ್ವಿಯಾಗಿ ನೆರವೇರಿವೆ.

1961ರ ಜನವರಿ 29ರಂದು ಮಾಳ ಗ್ರಾಮದ ಕೃಷಿಕ ಕುಟುಂಬದಲ್ಲಿ ಜನಿಸಿದ ರವೀಂದ್ರ ಪ್ರಭು ಅವರು ಬಾಲ್ಯದಿಂದಲೇ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರು. ಸರ್ವೋದಯ ಯುವಕ ಮಂಡಲ ಹಾಗೂ ಮಹಾಲಕ್ಷ್ಮಿ ಭಜನಾ ಮಂಡಳಿ ಸ್ಥಾಪಿಸಿ ಯುವಜನತೆಯನ್ನು ಸಾಮಾಜಿಕ ಸೇವೆಯತ್ತ ಕೊಂಡೊಯ್ದು, ಸರ್ವೋದಯ ಯುವಕ ಮಂಡಲವನ್ನು ಜಿಲ್ಲಾ ಮಟ್ಟದ ಶ್ರೇಷ್ಠ ಸಂಘಟನೆಯಾಗಿ ರೂಪಿಸಿದರು.

ಸಹಕಾರಿ, ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರಗಳಾದ್ಯಂತ ನಿಷ್ಠೆಯ ಸೇವೆ ಸಲ್ಲಿಸುತ್ತಿರುವ ಕಡಾರಿ ರವೀಂದ್ರ ಪ್ರಭು ಅವರಿಗೆ ದೊರೆತಿರುವ ಈ ‘ಸಹಕಾರ ರತ್ನ’ ಪ್ರಶಸ್ತಿ, ಕಾರ್ಕಳ ಮತ್ತು ಉಡುಪಿ ಜಿಲ್ಲೆಯ ಸಹಕಾರಿ ಚಳವಳಿಗೆ ಹೆಮ್ಮೆಯ ವಿಷಯವಾಗಿದೆ.