ಅಬುಧಾಬಿ: IPL 2021 ಟೂರ್ನಿಯ ಪ್ಲೇಆಫ್ ಹಂತಕ್ಕೆ ಪ್ರವೇಶಿಸಲು ಮುಂಬೈ ಇಂಡಿಯನ್ಸ್ ಮುಂದೆ ಬೆಟ್ಟದಷ್ಟು ಸವಾಲು ಇದೆ. ಐದು ಬಾರಿಯ ಚಾಂಪಿಯನ್ ಆಗಿರುವ ಮುಂಬೈ ಸದ್ಯ ವಿಷಮ ಸ್ಥಿತಿಯಲ್ಲಿದೆ. ಪ್ಲೇ ಆಫ್ ಕನಸು ಬಹುತೇಕ ಕಮರಿ ಹೋಗಿದ್ದು, ಇಂದು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಕೊನೆಯ ಲೀಗ್ ಪಂದ್ಯ ಆಡಲಿದೆ. ನಿರೀಕ್ಷೆಗೂ ಮೀರಿದ ರನ್‌ರೇಟ್‌ನೊಂದಿಗೆ ಗೆದ್ದರೆ ಮಾತ್ರ ಪ್ಲೇ ಆಫ್ ಹಂತ ತಲುಪಲು ಸಾಧ್ಯ.
ಮುಂಬೈ ಇಂಡಿಯನ್ಸ್ ಪ್ಲೇ ಆಫ್ ತಲುಪಬೇಕಾದರೆ ಏನು ಮಾಡಬೇಕು?, ಎಷ್ಟು ಮೊತ್ತದ ಅಂತರದಲ್ಲಿ ಗೆಲ್ಲಬೇಕು?, ಇಲ್ಲಿದೆ ನೋಡಿ ಲೆಕ್ಕಾಚಾರ:
ಮುಂಬೈ ಇಂಡಿಯನ್ಸ್ ತಂಡ ಒಟ್ಟು 13 ಪಂದ್ಯಗಳನ್ನು ಆಡಿದ್ದು ಆರು ಪಂದ್ಯಗಳಲ್ಲಿ ಜಯ ಸಾಧಿಸಿದೆ. ಏಳು ಪಂದ್ಯಗಳಲ್ಲಿ ಸೋತಿದೆ. ಒಟ್ಟು 12 ಅಂಕ ಸಂಪಾದಿಸಿದ್ದು, ಪಾಯಿಂಟ್ ಪಟ್ಟಿಯಲ್ಲಿ -0.048 ನೆಟ್ರೇಟ್ನೊಂದಿಗೆ ಆರನೇ ಸ್ಥಾನದಲ್ಲಿದೆ. ಇತ್ತ ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ ಬರೋಬ್ಬರಿ 86 ರನ್‌ಗಳ ಅಂತರದಿಂದ ಗೆಲುವು ಸಾಧಿಸಿರುವುದರಿಂದ 14 ಅಂಕಗಳೊಂದಿಗೆ +0.587 ನೆಟ್ ರನ್ ರೇಟ್ ಪಡೆದುಕೊಂಡು ನಾಲ್ಕನೇ ಸ್ಥಾನದಲ್ಲಿದೆ.
ಮುಂಬೈ ತಂಡ ಹೈದರಾಬಾದ್ ತಂಡದ ವಿರುದ್ಧ ಸೆಣಸಾಡಿ ಬಹು ದೊಡ್ಡ ಅಂತರದಲ್ಲಿ ಗೆಲುವು ಸಾಧಿಸಿ ಕೆಕೆಆರ್ ತಂಡಕ್ಕಿಂತ ಹೆಚ್ಚಿನ ನೆಟ್ ರನ್ ರೇಟ್ ಪಡೆದುಕೊಂಡರೆ ಮಾತ್ರ ಪ್ಲೇ ಆಫ್ ಹಂತವನ್ನು ಪ್ರವೇಶಿಸಬಹುದಾಗಿದೆ. ಇದಕ್ಕಾಗಿ ರೋಹಿತ್ ಪಡೆ 171 ರನ್‌ಗಳ ಅಂತರದಿಂದ ಗೆಲ್ಲಬೇಕಿದೆ. ಆದರೆ ಈ ಪಂದ್ಯದ ಟಾಸ್ ಈ ಲೆಕ್ಕಾಚಾರಗಳೆಲ್ಲ ಉಲ್ಟಾ ಮಾಡಿದರೆ ಅಚ್ಚರಿಯಿಲ್ಲ. ಈ ಪಂದ್ಯದಲ್ಲಿ ಹೈದರಾಬಾದ್ ತಂಡ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡರೆ ಆ ಕ್ಷಣವೇ ಮುಂಬೈ ಇಂಡಿಯನ್ಸ್ ತಂಡ ಪ್ಲೇಆಫ್ ರೇಸ್‌ನಿಂದ ಅಧಿಕೃತವಾಗಿ ಹೊರಬೀಳಲಿದೆ.
ಒಂದುವೇಳೆ ಮುಂಬೈ ಇಂಡಿಯನ್ಸ್ ತಂಡವು ಟಾಸ್ ಗೆದ್ದರೆ ಮೊದಲು ಬ್ಯಾಟಿಂಗ್ ಆಯ್ದುಕೊಂಡು ಕಡ್ಡಾಯವಾಗಿ ಕನಿಷ್ಠವೆಂದರೂ 220 ರನ್‌ಗಳನ್ನು ಮುಂಬೈ ಇಂಡಿಯನ್ಸ್ ತಂಡ ಕಲೆ ಹಾಕಲೇಬೇಕಾಗಿದೆ. ಅಷ್ಟು ಮಾತ್ರವಲ್ಲದೇ 220 ರನ್ ಗಳಿಸಿ ಎದುರಾಳಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು 49 ರನ್‌ಗಳಿಗೆ ಆಲೌಟ್ ಮಾಡಿ 171 ರನ್‌ಗಳಿಂದ ಮುಂಬೈ ಜಯ ಗಳಿಸಿದರೆ ಮಾತ್ರ ಪ್ಲೇ ಆಫ್ ಪ್ರವೇಶ ಸಾಧ್ಯ. ಹೀಗಾಗಿ ಮುಂಬೈ ಪ್ಲೇ ಆಫ್ ಹಾದಿ ತುಂಬಾನೆ ಕಠಿಣವಾಗಿದ್ದು, ಈ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿದೆ.
ರಾಜಸ್ಥಾನ್ ರಾಯಲ್ಸ್ ಎದುರಿನ ಪಂದ್ಯದಲ್ಲಿ ಕೋಲ್ಕತ್ತ ಸೋತಿದ್ದರೆ ಶುಕ್ರವಾರದ ಪಂದ್ಯದಲ್ಲಿ ಎದುರಾಳಿಯನ್ನು ಮಣಿಸಿ ಮುಂಬೈ ಇಂಡಿಯನ್ಸ್ ಅಂತಿಮ ನಾಲ್ಕರಲ್ಲಿ ಸ್ಥಾನ ಗಳಿಸಲು ಅವಕಾಶ ಇತ್ತು. ಆದರೆ ಈಗ ರೋಹಿತ್ ಶರ್ಮಾ ಬಳಗದ ಲೆಕ್ಕಾಚಾರ ಬುಡಮೇಲಾಗಿದೆ.