ಇಂದಿರಾ ಗಾಂಧಿ ಆಡಳಿತ ಇಡೀ ವಿಶ್ವಕ್ಕೆ ಮಾದರಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಉಡುಪಿ: ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಉಕ್ಕಿನ ಮಹಿಳೆ ಎನ್ನುವ ಬಿರುದಿಗೆ ತಕ್ಕ ಹಾಗೆ ಬದುಕಿ ತೋರಿಸಿದ್ದರು. ಅವರ ವ್ಯಕ್ತಿತ್ವ ಇಡೀ ವಿಶ್ವಕ್ಕೇ ಮಾದರಿ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.

ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಶುಕ್ರವಾರ ನಡೆದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಪುಣ್ಯ ಸ್ಮರಣೆ ಹಾಗೂ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಇಂದಿರಾ ಗಾಂಧಿ ನನ್ನ ಆದರ್ಶ, ನನ್ನಂತಹ ಲಕ್ಷಾಂತರ ಜನರಿಗೆ ಸ್ಫೂರ್ತಿಯ ಸೆಲೆ ಆಗಿದ್ದಾರೆ ಎಂದರು.

ಇಂದಿರಾ ಗಾಂಧಿಯವರ ರಾಜಕಾರಣ ಕೇವಲ ಮಹಿಳೆಯರಿಗಷ್ಟೇ ಅಲ್ಲದೆ, ಪುರುಷರಿಗೂ ಆದರ್ಶ. ಅವರ ನೇತೃತ್ವದಲ್ಲಿ ಭಾರತವು ಅಂತರಾಷ್ಟ್ರೀಯ ಮಟ್ಟದಲ್ಲಿ ಬಲಿಷ್ಠ ರಾಷ್ಟ್ರವಾಗಿ ಗುರುತಿಸಿಕೊಂಡಿತು. ಇಂದಿರಾಗಾಂಧಿ ದೇಶದ ಸ್ವಾವಲಂಬನೆಗಾಗಿ ಬ್ಯಾಂಕ್ ಗಳ ರಾಷ್ಟ್ರೀಕರಣ, ಹಸಿರು ಕ್ರಾಂತಿ ಸೇರಿದಂತೆ ಅನೇಕ ಆರ್ಥಿಕ ಮತ್ತು ಸಾಂಸ್ಕೃತಿಕ ಸುಧಾರಣೆಗಳನ್ನು ಆರಂಭಿಸಿದರು ಎಂದು ಹೇಳಿದರು. ‌

ಒಂದು ಹೊತ್ತು ಊಟ ಮಾಡಲು ಕಷ್ಟ ಪಡುತ್ತಿದ್ದ ಕಾಲದಲ್ಲಿ ಭಾರತವನ್ನು ಮುನ್ನಡೆಸಿ, ಇಡೀ ವಿಶ್ವಕ್ಕೆ ಮಾದರಿಯಾದರು. ತ್ಯಾಗ ಬಲಿದಾನಕ್ಕೆ ಹೆಸರಾದ ಮಹಿಳೆ, ಅವರ ಅಡಳಿತ ನಮಗೆ ಸ್ಫೂರ್ತಿ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸೋಕೆ ಪ್ರತಿಯೊಬ್ಬ ಕಾರ್ಯಕರ್ತನ ಶ್ರಮ ಅಗತ್ಯ. ದೇಶ ಉಳಿಬೇಕು ಎಂದರೆ ಕಾಂಗ್ರೆಸ್ ಪಕ್ಷ ಉಳಿಬೇಕು, ಉಡುಪಿ ಜಿಲ್ಲೆಯಲ್ಲಿ ಐದು ಕ್ಷೇತ್ರಗಳಲ್ಲಿ ಸೋತರೂ ಕಾಂಗ್ರೆಸ್ ಪಕ್ಷ ಜಿಲ್ಲೆಯಲ್ಲಿ ಬಲಿಷ್ಠವಾಗಿದೆ. ದೇಶದ ಭವಿಷ್ಯ, ಮಕ್ಕಳ ಭವಿಷ್ಯಕ್ಕಾಗಿ ಕಾಂಗ್ರೆಸ್ ಪಕ್ಷ ಅತ್ಯಗತ್ಯ ಎಂದು ಹೇಳಿದರು. ‌

  • ಸರ್ದಾರ್ ವಲ್ಲಭಭಾಯಿ ಪಟೇಲ್ ಅದರ್ಶ ಪುರುಷ
    ಹರಿದು ಹಂಚಿ ಹೋಗಿದ್ದ ಭಾರತವನ್ನು ಒಂದುಗೂಡಿಸಿದ ಖ್ಯಾತಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗೆ ಸಲ್ಲುತ್ತದೆ. ‌ಅಖಂಡ ಭಾರತ ನಿರ್ಮಾಣದಲ್ಲಿ ಅವರ ಪಾತ್ರ ದೊಡ್ಡದು ಎಂದರು.

ಈ ವೇಳೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಜ್ಯೋತಿ ಹೆಬ್ಬಾರ್, ಮುಖಂಡರಾದ ಉದಯ್ ಕುಮಾರ್ ಶೆಟ್ಟಿ, ರಮೇಶ್ ಕಾಂಚನ್ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.