ಇಂದಿರಾ ಗಾಂಧಿ ದೇಶದಲ್ಲಿ ಹೇರಿದ್ದ ತುರ್ತು ಪರಿಸ್ಥಿತಿ ತಪ್ಪು ನಿರ್ಣಯವಾಗಿತ್ತು: ರಾಹುಲ್ ಗಾಂಧಿ

ನವದೆಹಲಿ: 1975ರಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ದೇಶದಲ್ಲಿ ಹೇರಿದ್ದ ತುರ್ತು ಪರಿಸ್ಥಿತಿ ಒಂದು ತಪ್ಪು ನಿರ್ಣಯ ಆಗಿತ್ತು. ಅದರೆ, ಕಾಂಗ್ರೆಸ್ ಯಾವುದೇ ಕಾರಣಕ್ಕೂ ದೇಶದ ಸಾಂವಿಧಾನಿಕ ಚೌಕಟ್ಟನ್ನು ವಶಪಡಿಸಲು ಪ್ರಯತ್ನಿಸಿರಲಿಲ್ಲ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ.

ಅಮೆರಿಕದ ಕಾರ್ನೆಲ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಮತ್ತು ಭಾರತದ ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಕೌಶಿಕ್ ಬಸು ಅವರೊಂದಿಗಿನ ಸಂವಾದದಲ್ಲಿ ಅಭಿಪ್ರಾಯಪಟ್ಟರು.

ತುರ್ತು ಪರಿಸ್ಥಿತಿ ಬಗ್ಗೆ ಕೇಳಿದ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ಅದೊಂದು ತಪ್ಪು ನಿರ್ಧಾರವೆಂದು ನಾನು ಭಾವಿಸುತ್ತೇನೆ. ನನ್ನ ಅಜ್ಜಿ (ಇಂದಿರಾ ಗಾಂಧಿ) ಕೂಡ ಇದನ್ನೇ ಹೇಳಿದ್ದರು ಎಂದು ಉಲ್ಲೇಖ ಮಾಡಿದರು.

ಅಂದಿನ ತುರ್ತು ಪರಿಸ್ಥಿತಿ ಹಾಗೂ ಈಗ ದೇಶದಲ್ಲಿ ನಡೆಯುತ್ತಿರುವ ಸನ್ನವೇಶಗಳು ಮೂಲಭೂತವಾಗಿ ವಿಭಿನ್ನವಾಗಿವೆ. ಪ್ರಸ್ತುತ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಮೂಲಭೂತಕ್ಕೆ ವಿಭಿನ್ನವಾಗಿ ದೇಶದ ಸಾಂವಿಧಾನಿಕ ವ್ಯವಸ್ಥೆಗೆ ತನ್ನ ಜನರನ್ನು ತುಂಬುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದರು.