ನವದೆಹಲಿ: ಭಾರತವನ್ನು “ಹಿಂದೂ ರಾಷ್ಟ್ರ” ಎಂದು ಘೋಷಿಸಬೇಕೆಂದು ಕೇಂದ್ರ ಸರ್ಕಾರದ ಮುಂದೆ ಇಟ್ಟಿದ್ದ ಬೇಡಿಕೆ ಈಡೇರದ ಹಿನ್ನೆಲೆಯಲ್ಲಿ ಜಗದ್ಗುರು ಪರಮಹಂಸ ಆಚಾರ್ಯ ಮಹಾರಾಜ್ ಅವರು ಇಂದು (ಅ.2) ಸರಯೂ ನದಿಯಲ್ಲಿ ಜಲಸಮಾಧಿಯಾಗಲು ಬೇಕಾದ ಎಲ್ಲಾ ಸಿದ್ಧತೆ ಮಾಡಲಾಗುತ್ತಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಆಚಾರ್ಯ ಮಹಾರಾಜ್ ಕೆಲವು ದಿನಗಳ ಹಿಂದೆಯಷ್ಟೇ ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಬೇಕು. ಅಕ್ಟೋಬರ್ 2ರೊಳಗೆ ಘೋಷಿಸದಿದ್ದರೆ ಸರಯೂ ನದಿಯಲ್ಲಿ ಜಲ ಸಮಾಧಿಯಾಗುವುದಾಗಿ ಆಚಾರ್ಯರು ಕೇಂದ್ರ ಸರ್ಕಾರಕ್ಕೆ ಅಂತಿಮ ಗಡುವು ವಿಧಿಸಿದ್ದರು.
ಆಚಾರ್ಯ ಪರಮಹಂಸರನ್ನು ಸದ್ಯ ಗೃಹ ಬಂಧನದಲ್ಲಿ ಇರಿಸಲಾಗಿದ್ದು, ಯಾವುದೇ ಕಾರಣಕ್ಕೂ ಹೊರ ಬರಲು ಅನುಮತಿ ನೀಡಲಾಗುವುದಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಸ್ವಾಮೀಜಿಗಳಿಂದಲೂ ಪರಮಹಂಸರ ಮನವೊಲಿಕೆಯ ಕಾರ್ಯ ಮುಂದುವರಿದಿದೆ ಎಂದು ವರದಿ ತಿಳಿಸಿದೆ.
ಕೆಲವು ತಿಂಗಳ ಹಿಂದೆ ಹಿಂದೂ ರಾಷ್ಟ್ರ ಎಂದು ಘೋಷಿಸಬೇಕೆಂದು ಒತ್ತಾಯಿಸಿ ಸ್ವಯಂ ಬೆಂಕಿ ಹಚ್ಚಿಕೊಂಡು ಆತ್ಮಾಹುತಿಗೆ ಸಿದ್ದರಾಗಿದ್ದು, ಈ ಸಂದರ್ಭದಲ್ಲಿ ಅಯೋಧ್ಯೆ ಪೊಲೀಸರು ಆಚಾರ್ಯ ಪರಮಹಂಸರನ್ನು ತಡೆದು ಗೃಹಬಂಧನದಲ್ಲಿ ಇರಿಸಿದ್ದರು.
ಆ ಬಳಿಕ ಹಿಂದೂ ರಾಷ್ಟ್ರ ಎಂದು ಘೋಷಿಸಬೇಕೆಂದು ಆಗ್ರಹಿಸಿ 15 ದಿನಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಈ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಧ್ಯಪ್ರವೇಶಿಸಿ ಭರವಸೆ ನೀಡಿದ ನಂತರ ಉಪವಾಸ ಸತ್ಯಾಗ್ರಹ ಕೊನೆಗೊಳಿಸಿದ್ದರು.