ಪರ್ಕಳ ಪೇಟೆಯ ಹೆದ್ದಾರಿ ಅಗಲೀಕರಣ ಕಾಮಗಾರಿ: ಕಟ್ಟಡ ತೆರವಿಗೆ ಸ್ಥಳೀಯರ ವಿರೋಧ, ಅರ್ಧಕ್ಕೆ ಸ್ಥಗಿತಗೊಂಡ ತೆರವು ಕಾರ್ಯಾಚರಣೆ

ಉಡುಪಿ: ರಾಷ್ಟ್ರೀಯ ಹೆದ್ದಾರಿ 169(ಎ) ಅಗಲೀಕರಣ ಕಾಮಗಾರಿ ಪರ್ಕಳ ಪೇಟೆಯಲ್ಲಿ ಆರಂಭವಾಗಿದ್ದು, ಇದೀಗ ಪೇಟೆಯಲ್ಲಿದ್ದ ಕಟ್ಟಡ ತೆರವು ಕಾರ್ಯಕ್ಕೆ ಇಂದು ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತೆರವು ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ತಿಳಿದುಬಂದಿದೆ.

ಕಟ್ಟಡ ತೆರವು ಮಾಡುವ ಬಗ್ಗೆ ಹೆದ್ದಾರಿ ಅಧಿಕಾರಿಗಳು ಯಾವುದೇ ಮುನ್ಸೂಚನೆ ನೀಡಿಲ್ಲ. ಅಲ್ಲದೆ, ನೋಟಿಸ್ ಕೂಡ ಜಾರಿ ಮಾಡಿಲ್ಲ. ಏಕಾಏಕಿಯಾಗಿ ತೆರವು ಕಾರ್ಯ ಆರಂಭಿಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಸ್ಥಳಕ್ಕೆ ಮಣಿಪಾಲ ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಮಂಜುನಾಥ್ ಆಗಮಿಸಿ ಸ್ಥಳೀಯರನ್ನು ಮನವೊಲಿಸಿ ಪರಿಸ್ಥಿತಿ ನಿಭಾಯಿಸಲು ಪ್ರಯತ್ನಿಸಿದರು. ಆದರೆ ಸ್ಥಳೀಯರು ಹೆದ್ದಾರಿ ಪ್ರಾಧಿಕಾರದ ಹಿರಿಯ ಇಂಜಿನಿಯರ್ ಸ್ಥಳಕ್ಕೆ ಬರುವಂತೆ ಪಟ್ಟು ಹಿಡಿದರು.
ಈ ವೇಳೆ ಮಾತನಾಡಿದ ಉಡುಪಿ ನಗರಸಭೆ ವಿಪಕ್ಷ ನಾಯಕ ರಮೇಶ್ ಕಾಂಚನ್, ಅಮೃತ್ ಶೆಣೈ, ನೋಟಿಸ್ ಕೊಡದೆ ಕಟ್ಟಡ ತೆರವಿಗೆ ಮುಂದಾಗಿರುವುದು ಸರಿಯಾದ ಕ್ರಮವಲ್ಲ. ವಿದ್ಯುತ್ ಸಂಪರ್ಕವನ್ನು ಸ್ಥಗಿತಗೊಳಿಸಿಲ್ಲ. ಇದು ಯಾವ ರೀತಿಯ ಕಾರ್ಯಾಚರಣೆ ಎಂದು ಪ್ರಶ್ನಿಸಿದರು.

ಬಳಿಕ ಹಿರಿಯ ಇಂಜಿನಿಯರ್ ನಾಗರಾಜ್ ನಾಯ್ಕ್ ಸ್ಥಳಕ್ಕೆ ಆಗಮಿಸಿ ಸ್ಪಷ್ಟನೆಕೊಟ್ಟರು.
ಈಗಾಗಲೇ ತೆರವು ಕಾರ್ಯದ ಬಗ್ಗೆ ಹಲವು ಸುತ್ತಿನ ಸಭೆ ನಡೆಸಲಾಗಿದೆ. ತ್ರಿಡಿ ನೋಟಿಫಿಕೇಶನ್ ಜಾರಿಗೊಳಿಸಿದ್ದು, ಇದರ ಬಳಿಕ ಈ ಜಾಗ ಕೇಂದ್ರ ಸರ್ಕಾರದ ಸ್ವಾಧೀನಕ್ಕೆ ಬರುತ್ತದೆ. ಇದು ಕೊನೆಯ ನೋಟಿಸ್ ಆಗಿರುತ್ತದೆ ಎಂದರು. ಆಗ ಸಂತ್ರಸ್ತರು ಹಾಗೂ ಇಂಜಿನಿಯರ್ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು.

ಇದೀಗ ಕಟ್ಟಡ ತೆರವು ಕಾರ್ಯ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಒಂದೆರಡು ದಿನಗಳಲ್ಲಿ ಖಾಲಿ ಇರುವ ಕಟ್ಟಡವನ್ನು ಮೊದಲು ತೆರವು ಮಾಡುತ್ತೇವೆ. ಬಳಿಕ ಅಂಗಡಿ ಮುಂಗಟ್ಟು ತೆರವಿಗೆ ಒಂದುವಾರ ಕಾಲಾವಕಾಶ ಕೊಡುತ್ತೇವೆ ಎಂದು ಅವರು ತಿಳಿಸಿದರು.