ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮಿರಿಕ್ ಮತ್ತು ಡಾರ್ಜಿಲಿಂಗ್ ಬೆಟ್ಟಗಳಲ್ಲಿ ಭಾನುವಾರ ನಿರಂತರ ಭಾರಿ ಮಳೆಯಿಂದಾಗಿ ಭೀಕರ ಭೂಕುಸಿತ ಸಂಭವಿಸಿದ್ದು, ಮಕ್ಕಳು ಸೇರಿದಂತೆ ಕನಿಷ್ಠ 20 ಜನ ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ.
ಪ್ರವಾಹದಲ್ಲಿ ಮನೆಗಳು ಕೊಚ್ಚಿ ಹೋಗಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿವೆ. ಗ್ರಾಮಗಳು ಪ್ರತ್ಯೇಕಗೊಂಡಿವೆ ಮತ್ತು ನೂರಾರು ಪ್ರವಾಸಿಗರು ಅಪಾಯದಲ್ಲಿ ಸಿಲುಕಿಕೊಂಡಿದ್ದಾರೆ. ಪೊಲೀಸರು ಮತ್ತು ಸ್ಥಳೀಯ ಆಡಳಿತ ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎನ್‌ಡಿಆರ್‌ಎಫ್ ಮತ್ತು ಜಿಲ್ಲಾಡಳಿತ ಸಂಗ್ರಹಿಸಿದ ವರದಿಗಳ ಪ್ರಕಾರ, ಸರ್ಸಾಲಿ, ಜಸ್‌ಬಿರ್‌ಗಾಂವ್, ಮಿರಿಕ್ ಬಸ್ತಿ, ಧಾರ್ ಗಾಂವ್ (ಮೇಚಿ), ನಾಗರಕತ ಮತ್ತು ಮಿರಿಕ್ ಸರೋವರ ಪ್ರದೇಶ ಸೇರಿದಂತೆ ಹಲವಾರು ಸ್ಥಳಗಳಲ್ಲಿ ಸಾವುನೋವುಗಳು ವರದಿಯಾಗಿವೆ.
ಪೊಲೀಸರು, ಸ್ಥಳೀಯ ಆಡಳಿತ ಮತ್ತು ವಿಪತ್ತು ನಿರ್ವಹಣಾ ತಂಡಗಳ ಸಹಾಯದಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
ಅಕ್ಟೋಬರ್ 7 ರವರೆಗೆ ಈ ಪ್ರದೇಶದಲ್ಲಿ ಮಳೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದು ಉತ್ತರ ಬಂಗಾಳದಲ್ಲಿ ದಿಢೀರ್ ಪ್ರವಾಹಕ್ಕೆ ಕಾರಣವಾಗಬಹುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.


















