ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್: 4ನೇ ವರ್ಷದ ಬೃಹತ್ ಉದ್ಯೋಗ ಮೇಳ ಉದ್ಘಾಟನೆ

ಉಡುಪಿ: ಇಂದು ವಿದ್ಯಾರ್ಥಿಗಳು ಹೆಚ್ಚಿನ ವಿದ್ಯಾಭ್ಯಾಸ ಹೊಂದಿದರೂ ಸೂಕ್ತ ಉದ್ಯೋಗ ಪಡೆಯದೆ ಸಮಸ್ಯೆ ಅನುಭವಿಸುತ್ತಿದ್ದಾರೆ. ಹೀಗಾಗಿ ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗ ಸಮಸ್ಯೆಗಳು ಪರಿಹಾರವಾದರೆ, ಹೆಚ್ಚಿನ ಸಮಸ್ಯೆಗಳು ಪರಿಹಾರವಾಗಲಿದೆ ಎಂದು ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು.

ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಎಂಆರ್ ಜಿ ಗ್ರೂಪ್ ಪ್ರಾಯೋಜಕತ್ವದಲ್ಲಿ ಕುಂತಳನಗರದ ಗ್ರಾಮೀಣ ಬಂಟರ ಸಂಘದಲ್ಲಿ ಆಯೋಜಿಸಿದ 4ನೇ ವರ್ಷದ ಬೃಹತ್ ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿದರು.

ಸೋಲಿನಲ್ಲಿ ಗೆಲುವು ಕಾಣುವುದರಲ್ಲಿ ಸಂತೋಷ ವಿದ್ದು ವಿದ್ಯಾರ್ಥಿಗಳು ಸಣ್ಣ ಉದ್ಯೋಗಗಳಿಂದ ಅನುಭವ ಪಡೆದು ಉನ್ನತ ಸ್ಥಾನವನ್ನು ಪಡೆಯುವ ಗುರಿಯನ್ನು ಇಟ್ಟುಕೊಳ್ಳಬೇಕು. ಬದುಕು ಪ್ರತಿ ಹಂತದಲ್ಲಿ ಪರೀಕ್ಷೆ ಮಾಡುತ್ತದೆ ಅವುಗಳನ್ನು ಮೆಟ್ಟಿ ನಿಂತು ಜೀವನದಲ್ಲಿ ಯಶಸ್ಸು ಕಾಣವುದೇ ಜೀವನ ಎಂದರು.

ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ ಪ್ರತಿಭೆಗಳಿಗೆ ಅವಕಾಶ ನೀಡಿದಾಗ ಸಾಧನೆಯ ಅವಕಾಶ ಒದಗಿ ಬರುತ್ತದೆ. ಅವಿಭಜಿತ ಜಿಲ್ಲೆಯಲ್ಲಿ ಸಾಕಷ್ಟು ವಿದ್ಯಾಸಂಸ್ಥೆಗಳಿಂದ ಪ್ರತಿವರ್ಷ ಸಾವಿರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಪೊರೈಸಿ ಹೊರಬರುತ್ತಿದ್ದು ಸೂಕ್ತ ಉದ್ಯೋಗಗಳನ್ನು ಪಡೆಯದೆ ಸಮಸ್ಯೆ ಅನುಭವಿಸುತ್ತಿದ್ದಾರೆ. ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಕೌಶಲ್ಯಭರಿತ ಶಿಕ್ಷಣದ ಅವಶ್ಯಕತೆ ಇದ್ದು ಈ ನಿಟ್ಟಿನಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಗ್ರಾಮೀಣ ಬಂಟರ ಸಂಘದ ಕಾರ್ಯ ಶ್ಲಾಘನೀಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಅಶೋಕ್ ಕುಮಾರ್ ಶೆಟ್ಟಿ‌ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಪ್ರಮೋದ್ ಮಧ್ವ ರಾಜ್, ಬಿಜೆಪಿ ಮುಖಂಡರಾದ ಮಟ್ಟಾರ್ ರತ್ನಾಕರ್ ಹೆಗ್ಡೆ, ಉದಯ್ ಕುಮಾರ್ ಶೆಟ್ಟಿ, ಕಾಪು ಮಾರಿಗುಡಿಯ ವಾಸುದೇವ ಶೆಟ್ಟಿ, ಎಚ್ ಪಿ ಆರ್ ಗ್ರೂಪಿನ ಹರಿಪ್ರಸಾದ್ ರೈ, ಕೊಚ್ಚಿನ್ ಶಿಪ್ ಯಾರ್ಡ್ ನ ಸಿಇಒ ಹರಿಕುಮಾರ್,
ಜಾಬ್ ಫೇ‌ರ್ ಡ್ರೈವ್‌ನ ಛೇರ್ಮನ್ ಡಾ. ದಿವ್ಯಾರಾಣಿ, ಖಜಾಂಚಿ ವಿಜೇತ್ ಶೆಟ್ಟಿ, ಮುಖಂಡರಾದ ನವೀನ್ ಚಂದ್ರ ಶೆಟ್ಟಿ, ಎಚ್ ಬಿ ಶೆಟ್ಟಿ, ಪ್ರೊ. ಶರತ್ ಆಳ್ವಾ, ವಿಜಯ್ ಹೆಗ್ಡೆ, ಈಶ್ವರ್ ಪ್ರಸಾದ್ ಶೆಟ್ಟಿ, ಸುಕುಮಾರ್, ಕಾರ್ತಿಕ್ ಶೆಟ್ಟಿ, ಪದ್ಮನಾಭ ಹೆಗ್ಡೆ, ರಂಜನಿ ಹೆಗ್ಡೆ ಹಾಗೂ ಇತರರು ಉಪಸ್ಥಿತರಿದ್ದರು.