ಸೋಮವಾರದಿಂದ (ಮೇ 10) 14 ದಿನ ಕರ್ನಾಟಕದಾದ್ಯಂತ ಸಂಪೂರ್ಣ ಲಾಕ್ ಡೌನ್ ಘೋಷಣೆ: ಹೋಟೆಲ್, ಮದ್ಯ ಮಾರಾಟ ಬಂದ್

ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕಿನ ಆರ್ಭಟಕ್ಕೆ ತಡೆಯೊಡ್ಡುವ ಉದ್ದೇಶದಿಂದ ರಾಜ್ಯ ಸರ್ಕಾರ ಇದೇ ಸೋಮವಾರ (ಮೇ 10)ದಿಂದ ಮೇ 24ರ ವರೆಗೆ ರಾಜ್ಯಾದ್ಯಂತ 14 ದಿನಗಳ ಸಂಪೂರ್ಣ ಲಾಕ್ ಡೌನ್ ಘೋಷಣೆ ಮಾಡಿದೆ.

ಇಂದು ಸಿಎಂ ಬಿ.ಎಸ್. ಯಡಿಯೂರಪ್ಪನವರ ನೇತೃತ್ವದಲ್ಲಿ ನಡೆದ ಸಚಿವರು ಹಾಗೂ ಅಧಿಕಾರಿಗಳ ಸಭೆಯಲ್ಲಿ‌ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.

ಕೋವಿಡ್ ಎರಡನೇ ಅಲೆಯನ್ನು ನಿಯಂತ್ರಣ ಮಾಡಲು ರಾಜ್ಯ ಸರಕಾರವು ರಾಜ್ಯಾದ್ಯಂತ ಮೇ 12ರ ವರೆಗೂ ಕೋವಿಡ್ ಕರ್ಪ್ಯೂ ಜಾರಿಗೊಳಿಸಿತ್ತು. ಅಲ್ಲದೆ, ಇದಕ್ಕೂ ಮೊದಲು ನೈಟ್ ಕರ್ಪ್ಯೂ ಹಾಗೂ ವೀಕೆಂಡ್ ಲಾಕ್ ಡೌನ್ ಜಾರಿಗೊಳಿಸಿತ್ತು. ಆದರೆ ನೈಟ್ ಕರ್ಪ್ಯೂ ಹಾಗೂ ಕೋವಿಡ್ ಕರ್ಪ್ಯೂವಿನಿಂದ ನಿರೀಕ್ಷಿತ ಫಲ ದೊರಕದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಕಠಿಣ ನಿಯಮ ಜಾರಿಗೊಳಿಸಲು ನಿರ್ಧರಿಸಿದ್ದು, ಅದರಂತೆ ಮೇ 10ರಿಂದ ಮೇ 24ರ ವರೆಗೆ 14 ದಿನಗಳ ಸಂಪೂರ್ಣ ಲಾಕ್ ಡೌನ್ ಘೋಷಣೆ ಮಾಡಿದೆ.

ಲಾಕ್​​ಡೌನ್​​ ವೇಳೆ ಬೆಳಿಗ್ಗೆ 6 ಗಂಟೆಯಿಂದ 10 ಗಂಟೆ ವರೆಗೂ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿದೆ. ಅಲ್ಲದೇ ಕೋವಿಡ್ ಕರ್ಪ್ಯೂ ವೇಳೆ ನೀಡಲಾಗಿದ್ದ ಎಲ್ಲಾ ವಿನಾಯಿಗಳನ್ನು ರದ್ದು ಪಡಿಸಿ ಕಠಿಣ ನಿಯಮಗಳನ್ನು ಜಾರಿಗೊಳಿಸಿದೆ.