ಬೆಂಗಳೂರು: ಮಾಜಿ ಸಚಿವ ವಿನಯ್ ಕುಲಕರ್ಣಿ ಬಂಧನದಲ್ಲಿ ಕೇಂದ್ರ ಹಾಗೂ ರಾಜ್ಯ ನಾಯಕರ ಕೈವಾಡ ಇದೆ ಎಂದು ಪಂಚಮಸಾಲಿ ಮಠದ ಜಯಮೃತ್ಯುಂಜಯ ಸ್ವಾಮೀಜಿ ಆರೋಪಿಸಿದ್ದಾರೆ.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಪಂ ಸದಸ್ಯ ಯೋಗಿಶ್ ಗೌಡ ಕೊಲೆ ಪ್ರಕರಣದಲ್ಲಿ ಅಪರಾಧಿಯಲ್ಲದಿದ್ದರೂ ವಿನಯ್ ಕುಲಕರ್ಣಿ ಅವರನ್ನು ವಿಚಾರಣೆಗೆ ಒಳಪಡಿಸುವುದು ಸರಿಯಲ್ಲ. ಮುಖ್ಯ ಮಂತ್ರಿಗಳು ಈ ವಿಚಾರ ಕುರಿತು ಸಕಾರತಾತ್ಮಕ ನಿರ್ಧಾರ ಕೈಗೊಳ್ಳಬೇಕು ಎಂದರು.
ಲಿಂಗಾಯತ ಸಮಾಜದ ಮುಖಂಡರೊಬ್ಬರನ್ನು ಸಿಬಿಐ ಪೋಲಿಸರು ಬಂದಿಸಿರುವುದು ಖಂಡನೀಯ. ವಿನಯ್ ಕುಲಕರ್ಣಿ ಅವರನ್ನು ಬಂಧಿಸುವ ಮುನ್ನ ಕನಿಷ್ಠ ನೋಟಿಸ್ ನೀಡಬಹುದಿತ್ತು.ಚುನಾವಣೆ ಸಂದರ್ಭದಲ್ಲಿ ಕೇವಲ ನಮ್ಮ ಜನಾಂಗವನ್ನು ಬಳಕೆ ಮಾಡಿಕೊಳ್ಳುವ ಪವೃತ್ತಿಯನ್ಬು ರಾಜಕೀಯ ನಾಯಕರು ಬೆಳೆಸಿಕೊಂಡಿದ್ದಾರೆ ಎಂದು ಕಿಡಿಕಾರಿದರು.
ನಮ್ಮ ಇಡೀ ಸಮುದಾಯ, ಪಂಚಾಮ ಸಾಲಿ ಮಠ ವಿನಯ್ ಕುಲಕರ್ಣಿ ಜೊತೆಗಿದೆ. ಇಡೀ ಧಾರವಾಡದಲ್ಲಿ ವಿನಯ್ ಕುಲಕರ್ಣಿ ಏನೆಂಬುದು ಗೊತ್ತಿದೆ. ಅವರನ್ನು ರಾಜಕೀಯವಾಗಿ ಹತ್ತಿಕ್ಕುವ ಪ್ರಯತ್ನ ನಡೆಸಿರುವುದು ಸರಿಯಲ್ಲ. ದ್ವೇಷ ರಾಜಕಾರಣ ಮಾಡುವುದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು.