ನಕಲಿ ಕಟ್ಟಡ ಕಾರ್ಮಿಕ ಕಾರ್ಡ್ ನೋಂದಣಿ ರದ್ಧತಿ ಅಭಿಯಾನ: ತಪ್ಪಿತಸ್ಥರ ಮೇಲೆ ಕಾನೂನು ಕ್ರಮ

ಉಡುಪಿ: ಕಾರ್ಮಿಕ ಇಲಾಖೆಯ ವತಿಯಿಂದ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ
ಮಂಡಳಿಯಲ್ಲಿ ನೋಂದಣಿಯಾಗಿರುವ ಫಲಾನುಭವಿಗಳಿಗೆ ವಿವಿಧ ಆರ್ಥಿಕ ಸೌಲಭ್ಯಗಳನ್ನು ನೀಡಲಾಗುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಲ್ಲದವರು ನಕಲಿ ದಾಖಲಾತಿ ಸೃಷ್ಠಿಸಿ, ಮಂಡಳಿಯಿಂದ ನೀಡುವ ಕಾರ್ಮಿಕರ ಗುರುತಿನ ಚೀಟಿ ಪಡೆದು, ಸೌಲಭ್ಯಗಳನ್ನು ಪಡೆಯುತ್ತಿರುವುದು ಮಂಡಳಿಯ ಗಮನಕ್ಕೆ ಬಂದಿರುವುದರಿಂದ ಜಿಲ್ಲೆಯಾದ್ಯಂತ ಫೆಬ್ರವರಿ 25 ರ ವರೆಗೆ ಬೋಗಸ್ ಕಾರ್ಡ್ ನೋಂದಣಿ ರದ್ಧತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗುತ್ತದೆ.

ಈಗಾಗಲೇ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಲ್ಲದವರು ಗುರುತಿನ ಚೀಟಿ ಮಾಡಿಕೊಂಡಿದ್ದಲ್ಲಿ ಸ್ವ-ಇಚ್ಛೆಯಿಂದ ಸಂಬಂಧಪಟ್ಟ ಕಾರ್ಮಿಕ ನಿರೀಕ್ಷಕರ ಕಚೇರಿಗೆ ಹಿಂತಿರುಗಿಸಿದ್ದಲ್ಲಿ ಅವರ ವಿರುದ್ಧ ತೆಗೆದುಕೊಳ್ಳುವ ಮುಂದಿನ ಕಾನೂನು ಕ್ರಮವನ್ನು ಕೈಬಿಡಲಾಗುವುದು. ತಪ್ಪಿದಲ್ಲಿ ಅಂತಹ ಗುರುತಿನ ಚೀಟಿ ಹೊಂದಿರುವ ವ್ಯಕ್ತಿಗಳ ದಾಖಲೆಗಳನ್ನು ಪರಿಶೀಲನೆ ನಡೆಸಿ, ಅನರ್ಹರನ್ನು ಪತ್ತೆಹಚ್ಚಿ ನೋಂದಣಿಯನ್ನು ರದ್ದುಪಡಿಸಿ, ಸೂಕ್ತ ಕಾನೂನು ಕ್ರಮ ಜರುಗಿಸುವುದರ ಜೊತೆಗೆ ಈಗಾಗಲೇ ಪಡೆದಿರುವ ವಿವಿಧ ಸೌಲಭ್ಯಗಳನ್ನು ವಸೂಲಿ ಮಾಡಲಾಗುವುದು.

ಅನರ್ಹ ಕಾರ್ಮಿಕರಿಗೆ ಉದ್ಯೋಗ ಪ್ರಮಾಣ ಪತ್ರ ನೀಡುವ ವ್ಯಕ್ತಿ, ಸಂಸ್ಥೆ, ಪ್ರಾಧಿಕಾರ ಹಾಗೂ ಸಂಘಟನೆಗಳಿಗೂ ಭಾರತೀಯ ದಂಡ ಸಂಹಿತೆ ಅನುಸಾರ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಉಡುಪಿ ಉಪವಿಭಾಗದ ಕಾರ್ಮಿಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.