ಬೆಂಗಳೂರು: ಪಡಿತರ ಚೀಟಿ ಇರುವ ಎಲ್ಲ ಮನೆಗಳಿಗೂ ವಿದ್ಯುತ್ ಸಂಪರ್ಕ ನೀಡುವುದು ಸಹಿತ ಬಜೆಟ್‌ನಲ್ಲಿ ಘೋಷಿಸಿರುವ ಎಲ್ಲ ಯೋಜನೆಗಳನ್ನು ಆದ್ಯತೆ ಮೇಲೆ ಅನುಷ್ಠಾನಗೊಳಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಇಂಧನ ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ.
ಬೆಂಗಳೂರಿನ ಕೆಪಿಟಿಸಿಎಲ್ ಕಚೇರಿಯ ಸಮ್ಮೇಳನ ಸಭಾಂಗಣದಲ್ಲಿ ಬುಧವಾರ ಇಂಧನ ಇಲಾಖೆ ಸಭೆಯಲ್ಲಿ ಮಾತನಾಡಿದರು.
ವಿದ್ಯುತ್ ರೀಚಾರ್ಜ್ ಕೇಂದ್ರಗಳ ಆರಂಭಕ್ಕೆ ಆದ್ಯತೆ:
ವಿದ್ಯುತ್ ಚಾಲಿತ ವಾಹನಗಳು ಹೆಚ್ಚಿನ ಪ್ರಮಾಣದಲ್ಲಿ ತಯಾರಾಗುತ್ತಿರುವುದರಿಂದ ವಿದ್ಯುತ್ ವಾಹನ ಚಾರ್ಜಿಂಗ್ ಕೇಂದ್ರಗಳನ್ನು ಆರಂಭಿಸಲು ಆದ್ಯತೆ ನೀಡಬೇಕು. ಈಗಾಗಲೇ ಗುರುತಿಸಿರುವ ಸ್ಥಳಗಳಲ್ಲಿ ವಿದ್ಯುತ್ ರೀಚಾರ್ಜಿಂಗ್ ಮಾಡುವ ಕಾರ್ಯಕ್ಕೆ ವೇಗ ನೀಡಬೇಕೆಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.
ಗ್ರಾಹಕ ಸಂಬಂಧಿ ಸಮಸ್ಯೆಗಳ ಪರಿಹಾರ, ಹೊಸ ವಿದ್ಯುತ್ ಸಂಪರ್ಕ ನೀಡಿಕೆ ಸೇರಿದಂತೆ ವಿವಿಧ ಸೇವೆಗಳನ್ನು ಒಂದೇ ಕಡೆ 24 ಗಂಟೆಯೊಳಗೆ ಒದಗಿಸುವ ಫಾಸ್ಟ್‌ಟ್ರಾಕ್ ಸೆಲ್ ಅನ್ನು ಕೂಡಲೇ ಆರಂಭಿಸಲು ಸಚಿವರು ಆದೇಶಿಸಿದರು.