ಕುರಿ, ಕೋಳಿ ಮಾಂಸಕ್ಕಿಂತ ಗೋಮಾಂಸ ಹೆಚ್ಚು ತಿನ್ನಿ ಎಂದ ಬಿಜೆಪಿ ಸಚಿವ!

ಶಿಲ್ಲಾಂಗ್: ಬಿಜೆಪಿ ಅಧಿಕಾರದಲ್ಲಿ ಇರುವ ರಾಜ್ಯಗಳಲ್ಲಿ ಗೋಹತ್ಯೆ ನಿಷೇಧ ಕಾನೂನು ಜಾರಿಗೊಳಿಸಲು ಮುಂದಾಗಿದ್ದರೆ, ಮೇಘಾಲಯದಲ್ಲಿ ಮಾತ್ರ ಇದಕ್ಕೆ ಸಂಪೂರ್ಣ ವಿರುದ್ಧವಾಗಿದೆ.

ಬಿಜೆಪಿ ಹಿರಿಯ ನಾಯಕ ಹಾಗೂ ಮೇಘಾಲಯದ ನೂತನ ಪಶು ಸಂಗೋಪನೆ ಮತ್ತು ಪಶುವೈದ್ಯ ಖಾತೆ ಸಚಿವ ಸಣ್ಬೂರ್‌ ಶುಲ್ಲೈ, ‘ಕುರಿ, ಕೋಳಿ ಮತ್ತು ಮೀನಿನ ಮಾಂಸಕ್ಕಿಂತ ಹೆಚ್ಚು ಗೋವಿನ ಮಾಂಸವನ್ನು ಸೇವಿಸಿ’ ಎನ್ನುವ ಮೂಲಕ‌ ಹೊಸ ವಿವಾದ ಸೃಷ್ಟಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರಿಗೆ ಗೋಮಾಂಸ ಸೇವಿಸಲು ಉತ್ತೇಜಿಸುವ ಮೂಲಕ, ತಮ್ಮ ಸರ್ಕಾರ ಗೋಹತ್ಯೆ ನಿಷೇಧ ಕಾನೂನನ್ನು ಜಾರಿಗೆ ತರುತ್ತದೆ ಎಂಬ ಜನರಲ್ಲಿರುವ ಆತಂಕವನ್ನು ದೂರ ಮಾಡುತ್ತೇವೆ ಎಂದಿದ್ದಾರೆ.

ಕಳೆದವಾರವಷ್ಟೇ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಿಜೆಪಿಯ ಹಿರಿಯ ನಾಯಕ ಶುಲ್ಲೈ, ‘ಪ್ರಜಾಪ್ರಭುತ್ವ ರಾಷ್ಟ್ರದಲ್ಲಿರುವ ಪ್ರತಿಯೊಬ್ಬರೂ, ತಮಗೆ ಇಷ್ಟವಾದ ಆಹಾರವನ್ನು ಸೇವಿಸಲು ಸ್ವತಂತ್ರರು ಎಂದು ಹೇಳಿದ್ದಾರೆ.

ನೆರೆಯ ರಾಜ್ಯ ಅಸ್ಸಾಂನಲ್ಲಿ ಗೋಹತ್ಯೆ ನಿಷೇಧ ಕಾನೂನು ಜಾರಿಯಾಗಿದೆ. ಆ ಹೊಸ ಕಾನೂನಿಂದ ಮೇಘಾಲಯಕ್ಕೆ ಜಾನುವಾರ ಸಾಗಣೆ ಮೇಲೆ ಯಾವುದೇ ಪರಿಣಾಮ ಬೀರದಂತೆ ನೋಡಿಕೊಳ್ಳಲು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದರು.