ಉಡುಪಿ: ದೇಶದಾದ್ಯಂತ ಮೇ 1ರಿಂದ 18 ವರ್ಷ ಮೇಲ್ಪಟ್ಟವರೆಲ್ಲರೂ ಕೋವಿಡ್ ಲಸಿಕೆ ಪಡೆದುಕೊಳ್ಳುವಂತೆ ಕೇಂದ್ರ ಸರ್ಕಾರ ಸೂಚಿಸಿದೆ. ಕೋವಿಡ್ ಲಸಿಕೆ ಪಡೆದವರು ಮುಂದಿನ 20ರಿಂದ 28 ದಿನಗಳ ಕಾಲ ರಕ್ತದಾನ ಮಾಡಲು ಸಾಧ್ಯವಾಗುವುದಿಲ್ಲ. ಇದರಿಂದ ದೇಶಾದ್ಯಂತ ರಕ್ತದ ಕೊರತೆ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ರಕ್ತದಾನಿಗಳು ಮೇ 1ರ ಮೊದಲು ತಮ್ಮ ಊರಿನ ಸಮೀಪದ ಅಥವಾ ರಕ್ತದ ಅಭಾವವಿರುವ ರಕ್ತನಿಧಿ ಕೇಂದ್ರಕ್ಕೆ ತೆರಳಿ ರಕ್ತದಾನ ಮಾಡುವಂತೆ ರಕ್ತದ ಅಪತ್ಭಾಂದವ ಸತೀಶ್ ಸಾಲ್ಯಾನ್ ಮಣಿಪಾಲ ಅವರು ಮನವಿ ಮಾಡಿದ್ದಾರೆ.
ಪ್ರತಿ ವರ್ಷವೂ ಮೇ ತಿಂಗಳಲ್ಲಿ ತೀವ್ರ ಕೊರತೆ ಉಂಟಾಗುತ್ತಿದ್ದು, ಕೊರೊನಾ ಎರಡನೆ ಅಲೆಯಿಂದ ಅದು ತೀವ್ರಗೊಳ್ಳಲಿದೆ. ಹಾಗಾಗಿ ಈ ರಕ್ತದ ಕೊರತೆಯನ್ನು ನೀಗಿಸಲು ರಕ್ತದಾನಿಗಳು ಕೋವಿಡ್ ಲಸಿಕೆ ಪಡೆಯುವ ಮುನ್ನ ರಕ್ತನಿಧಿ ವಿಭಾಗಕ್ಕೆ ತೆರಳಿ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರೆ, ತಾತ್ಕಾಲಿಕವಾಗಿ ರಕ್ತದ ಕೊರತೆಯನ್ನು ನೀಗಿಸಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.