ದ.ಕ. ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್: ₹ 1 ಕೋಟಿ ಮೌಲ್ಯದ ಸೇವಾ ಯೋಜನೆಗಳ ವಿತರಣೆ

ಉಡುಪಿ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ಆಶ್ರಯದಲ್ಲಿ ಮಣಿಪಾಲ ಸಿಗ್ನಾ ಪ್ರೋಹೆಲ್ತ್ ಗ್ರೂಪ ಇನ್ಶೂರೆನ್ಸ್ ಕಾರ್ಡ್, ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮ ಮುಳಿಹಿತ್ಲು ಪ್ರಧಾನ ಕಚೇರಿಯಲ್ಲಿ ಶನಿವಾರ ನಡೆಯಿತು.

ಉಡುಪಿ ಅಂಬಲಪಾಡಿ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ನ ಪ್ರವರ್ತಕ ಡಾ. ಜಿ. ಶಂಕರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಳೆದ 5 ವರ್ಷಗಳಿಂದ ಈ ಕಾರ್ಯಕ್ರಮಕ್ಕೆ ನಾನು ಆಗಮಿಸುತ್ತಿದ್ದು, ಯಶ್‍ಪಾಲ್ ಸುವರ್ಣರವರ ಅಧ್ಯಕ್ಷತೆಯಲ್ಲಿ ಉತ್ತಮ ಕೆಲಸಗಳು ನಡೆಯುತ್ತಿದೆ. ಜಾತಿ ಧರ್ಮದ ಭೇದವಿಲ್ಲದೆ ಮೀನುಗಾರರಿಗೆ ಸಹಾಯ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮಂಗಳೂರಿನಲ್ಲಿ ನೂತನ ಕಚೇರಿ ತಲೆ ಎತ್ತಲಿದ್ದು, ಈಗಿರುವ ಕಚೇರಿಯಲ್ಲಿಯೂ ಸಂಸ್ಕರಣಾ ಘಟಕ ಸೇರಿದಂತೆ ಮತ್ತಷ್ಟು ಸೌಕರ್ಯ ಕಲ್ಪಿಸಬೇಕಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದ.ಕ. ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ಮಂಗಳೂರು ಇದರ ಅಧ್ಯಕ್ಷ ಯಶ್‍ಪಾಲ್ ಸುವರ್ಣ ಮಾತನಾಡಿ, ಮುಂದಿನ ಆರ್ಥಿಕ ವರ್ಷದಲ್ಲಿ ಮಂಗಳೂರು ನಗರದ ಹೃದಯ ಭಾಗದಲ್ಲಿ ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ಮೀನುಗಾರಿಕಾ ತರಬೇತಿ ಕೇಂದ್ರ, ಮತ್ಸ್ಯ ಕ್ಯಾಂಟೀನ್ ಒಳಗೊಂಡ ಸುಸಜ್ಜಿತ ಪ್ರಧಾನ ಕಚೇರಿ ನಿರ್ಮಾಣ ಯೋಜನೆ ಆಡಳಿತ ಮಂಡಳಿ ಮುಂದಿದೆ ಎಂದರು.

ಸಾಧಕರಿಗೆ ಸನ್ಮಾನ:
ಇದೇ ವೇಳೆ ಮೀನುಗಾರಿಕಾ ಇಲಾಖೆ ಉಪನಿರ್ದೇಶಕರಾಗಿ ನಿವೃತ್ತಿ ಹೊಂದಿದ ಪಾರ್ಶ್ವನಾಥ, ರಕ್ತದಾನದ ಆಪತ್ಭಾಂಧವ ಸತೀಶ್ ಸಾಲ್ಯಾನ್ ಮಣಿಪಾಲ, ಸಾಧಕಿ ಬೇಬಿ ಎಚ್. ಸಾಲ್ಯಾನ್ ಅವರನ್ನು ಗೌರವಿಸಲಾಯಿತು.

ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಕಾಂಚನ ಹ್ಯುಂಡೈ ಆಡಳಿತ ನಿರ್ದೇಶಕರಾದ ಪ್ರಸಾದ್ ರಾಜ್ ಕಾಂಚನ್, ಮೀನುಗಾರಿಕಾ ಫೆಡರೇಷನ್ ಉಪಾಧ್ಯಕ್ಷ ಪುರುಷೋತ್ತಮ ಅಮೀನ್, ವ್ಯವಸ್ಥಾಪಕ ನಿರ್ದೇಶಕ ಹರೀಶ್ ಕುಮಾರ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

105 ವಿದ್ಯಾರ್ಥಿಗಳಿಗೆ 1.50 ಲಕ್ಷ ರೂ. ವಿದ್ಯಾರ್ಥಿ ವೇತನ, ಸಹಕಾರಿ ಸಂಘಗಳ 1510 ಕುಟುಂಬ ಸದಸ್ಯರಿಗೆ ರೂ. 22,65,000 ಮೊತ್ತದ ಮಣಿಪಾಲ ಸಿಗ್ನಾ ಹೆಲ್ತ್ ಕಾರ್ಡ್ ವಿತರಿಸಲಾಯಿತು. ಬೋಟ್ ಮಾಲಕರಿಗೆ 81 ಲಕ್ಷ ರೂ. ಪ್ರೋತ್ಸಾಹಧನ ಘೋಷಿಸಲಾಯಿತು. ಒಟ್ಟು 1 ಕೋಟಿ ರೂ. ಮೌಲ್ಯದ ಸೇವಾ ಯೋಜನೆಗಳ ವಿತರಣೆ ನಡೆಯಿತು. ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದ ಜೀರ್ಣೋದ್ದಾರಕ್ಕೆ ಫೆಡರೇಷನ್ ವತಿಯಿಂದ ಪ್ರಥಮ ಹಂತವಾಗಿ 10 ಲಕ್ಷ ರೂ. ಚೆಕ್ ಅನ್ನು ಡಾ. ಜಿ. ಶಂಕರ್ ಅವರಿಗೆ ಯಶ್‍ಪಾಲ್ ಸುವರ್ಣ ಹಸ್ತಾಂತರಿಸಿದರು.