ಉಡುಪಿ ವಕೀಲರ ಸಂಘದ ಚುನಾವಣೆಗೆ ತಡೆ ಕೋರಿದ ಅರ್ಜಿ ವಜಾ: ಸಮಯಸಾಧಕರಿಗೆ ತೀವ್ರ ಮುಖಭಂಗ – ರೆನೋಲ್ಡ್ ಪ್ರವೀಣ್ ಕುಮಾರ್

ಉಡುಪಿ: ಉಡುಪಿ ವಕೀಲರ ಸಂಘದ ಯಾವುದೇ ಕಾರ್ಯಕ್ರಮ, ಅಭಿವೃದ್ಧಿ ಕಾರ್ಯಗಳಿಗೆ ಅಸಹಕಾರ ನೀಡುತ್ತಾ, ನಿರಂತರ ಕಿರುಕುಳ ಹಾಗೂ ಗೂಂಡಾ ವರ್ತನೆಗೆ ಹೆಸರಾದ ಎದುರಾಳಿ ಬಣವು ನೇರವಾಗಿ ಮತ್ತು ನ್ಯಾಯಯುತವಾಗಿ ಚುನಾವಣೆಯನ್ನು ಎದುರಿಸಲಾಗದೆ, ಸೋಲಿನ ಭಯದಿಂದ ಹತಾಶರಾಗಿ, ನಿಯಮಾವಳಿಯಂತೆ ಮತ್ತು ಪಾರದರ್ಶಕವಾಗಿ ದಿನಾಂಕ 21.11.2025ರಂದು ನಡೆಸಲಾಗುತ್ತಿರುವ ಉಡುಪಿ ವಕೀಲರ ಸಂಘದ ಚುನಾವಣೆಗೆ ಕ್ಷುಲ್ಲಕ ಕಾರಣಗಳನ್ನು ಒಡ್ಡಿ, ವಕೀಲರ ಸಂಘದ ಅಭಿವೃದ್ಧಿಗೆ ಕಿಂಚಿತ್ತೂ ಕೊಡುಗೆ ನೀಡದ ಮತ್ತು ಕುತಂತ್ರಕ್ಕೆ ಹೆಸರಾದ ಎಚ್. ರತ್ನಾಕರ ಶೆಟ್ಟಿ, ಸಂಜಯ್ ಕೆ. ನೀಲಾವರ ಮತ್ತು ಶ್ರೀಮತಿ ವಾಣಿ ವಿ. ರಾವ್ ಇವರ ಮೂಲಕ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ತಡೆಯಾಜ್ಞೆ ಕೋರಿ ಸಲ್ಲಿಸಿದ ರಿಟ್ ಅರ್ಜಿ ಸಂಖ್ಯೆ : 33187/2025ನ್ನು ಇಂದು ತಾ. 04.11.2025ರಂದು ವಿಚಾರಣೆ ನಡೆಸಿದ ಗೌರವಾನ್ವಿತ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಇವರ ನೇತೃತ್ವದ ಪೀಠವು ರಿಟ್ ಅರ್ಜಿಯಲ್ಲಿ ಯಾವುದೇ ಹುರುಳಿಲ್ಲವೆಂದು ರಿಟ್ ಅರ್ಜಿಯನ್ನು ವಜಾಗೊಳಿಸಿ ಆದೇಶ ಹೊರಡಿಸಿರುತ್ತದೆ.

ಈಗಾಗಲೇ ಬೆರಳೆಣಿಕೆಯ ಕೆಲ ಸಮಯಸಾಧಕರು ತಮ್ಮ ವೈಯಕ್ತಿಕ ಸ್ವಾರ್ಥ ಸಾಧನೆಗಾಗಿ ನಮ್ಮ ಪ್ರತಿಷ್ಠಿತ ವಕೀಲರ ಸಂಘವನ್ನು ಇಬ್ಬಾಗ ಮಾಡುವ ದುರುದ್ದೇಶದಿಂದ ನಮ್ಮ ಸಂಘಕ್ಕೆ ಸಮಾನಾಂತರವಾಗಿ “ಉಡುಪಿ ಎಡ್ವಕೇಟ್ಸ್ ವೆಲ್ಫೇರ್, ಸ್ಪೋರ್ಟ್ಸ್ ಅಂಡ್ ಕಲ್ಬರಲ್ ಕ್ಲಬ್” ಎಂಬ ಸಂಸ್ಥೆಯನ್ನು ಹುಟ್ಟು ಹಾಕಿದ್ದು, ಅಪಪ್ರಚಾರವನ್ನೇ ತನ್ನ ಬಂಡವಾಳವನ್ನಾಗಿರಿಸಿಕೊಂಡಿರುವ ಸಮಯಸಾಧಕ ತಂಡಕ್ಕೆ ಈ ಬೆಳವಣಿಗೆಯಿಂದ ತೀವ್ರ ಮುಖಭಂಗವಾಗಿದ್ದು, ಸಂಘದ ಸದಸ್ಯರು ಈ ಸಮಯಸಾಧಕರಿಗೆ ಮುಂಬರುವ ಚುನಾವಣೆಯಲ್ಲಿ ತಕ್ಕ ಪಾಠವನ್ನು ಕಲಿಸಿ, ನಮ್ಮ ಸಂಘದ ಘನತೆ ಮತ್ತು ಪ್ರತಿಷ್ಠೆಯನ್ನು ಎತ್ತಿ ಹಿಡಿಯಬೇಕು ಎಂದು ಉಡುಪಿ ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್ ಪ್ರವೀಣ್ ಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.