ತಮಿಳರಿಗೆ ಸಿಎಂ ಸ್ಟಾಲಿನ್ ರಿಂದ ಭರ್ಜರಿ ಕೊಡುಗೆ: ₹2 ಸಾವಿರ ಕೋವಿಡ್ ಪರಿಹಾರ, ಹಾಲಿನ ದರ ಕಡಿತ

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿದ ಬೆನ್ನಲ್ಲೇ ಎಂ.ಕೆ.ಸ್ಟಾಲಿನ್ ಅವರು ರಾಜ್ಯದ ಜನರಿಗೆ ಭರ್ಜರಿ ಗಿಫ್ಟ್ ಕೊಟ್ಟಿದ್ದಾರೆ.

ಇಂದು ಅವರು ತಮಿಳುನಾಡಿ 8 ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇದರ ಬಳಿಕ ತಮಿಳುನಾಡು ಜನತೆ ಭರ್ಜರಿ ಕೊಡುಗೆ ಘೋಷಿಸಿದ್ದಾರೆ.

2 ಸಾವಿರ ರೂಪಾಯಿ ಕೋವಿಡ್ ಕಾಲದ ಪರಿಹಾರ, ಸರ್ಕಾರದ ಆವಿನ್ ಹಾಲಿನ ದರ ಕಡಿತ ಮತ್ತು ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೇರಿದಂತೆ ಡಿಎಂಕೆ ಪಕ್ಷ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸಿದ್ದಾರೆ.

ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರಿ ವಿಮಾ ಯೋಜನೆಯಡಿ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ಒದಗಿಸುವ ಯೋಜನೆ ಜಾರಿಗೆ ತರುವುದಾಗಿ ಘೋಷಿಸಿದರು.

ಪಡಿತರ ಚೀಟಿ ಹೊಂದಿರುವ 2,07,67,000 ಜನರಿಗೆ ಮೇ ತಿಂಗಳಲ್ಲಿ ಮೊದಲ ಕಂತು ತಲಾ ₹ 2,000 ಕೋವಿಡ್ ಸಂಕಷ್ಟದ ಪರಿಹಾರ ನೀಡುವ ₹ 4,153.69 ಯೋಜನೆಯ ಆದೇಶಕ್ಕೆ ಮುಖ್ಯಮಂತ್ರಿ ಸಹಿ ಹಾಕಿದ್ದಾರೆ.

ಮೇ 16ರಿಂದ ಜಾರಿಗೆ ಬರುವಂತೆ ಸರ್ಕಾರ ಪೂರೈಸುವ ಆವಿನ್ ಹಾಲಿನ ಬೆಲೆಯಲ್ಲಿ ಲೀಟರ್‌ಗೆ ₹ 3 ಇಳಿಕೆ ಮಾಡಿ ಮತ್ತೊಂದು ಆದೇಶಕ್ಕೆ ಸಹಿ ಹಾಕಿದರು. ಶನಿವಾರದಿಂದ ರಾಜ್ಯ ಸಾರಿಗೆ ನಿಗಮವು ನಿರ್ವಹಿಸುವ ಎಲ್ಲಾ ಸಾಮಾನ್ಯ ಶುಲ್ಕ ನಗರ ಬಸ್‌ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದು ಎಂದು ತಿಳಿಸಿದೆ.