ಮಾ. 14ಕ್ಕೆ ಕೆಮ್ತೂರು ದೊಡ್ಡಣ್ಣ ಶೆಟ್ರ ಸಂಸ್ಮರಣೆ

ಉಡುಪಿ: ತುಳುಕೂಟ ಉಡುಪಿ ವತಿಯಿಂದ ಸ್ವಾತಂತ್ರ ಹೋರಾಟಗಾರ, ಹಿರಿಯ ನಾಟಕಕಾರ ಕೆಮ್ತೂರು ದೊಡ್ಡಣ್ಣ ಶೆಟ್ಟಿ ಅವರ ಸಂಸ್ಮರಣಾ ಕಾರ್ಯಕ್ರಮ ಮಾ.14ರಂದು ಎಂಜಿಎಂ ಕಾಲೇಜಿನಲ್ಲಿ ನಡೆಯಲಿದೆ.ಇದರ ಅಂಗವಾಗಿ ತುಳು ನಾಟಕ ಪ್ರದರ್ಶನ, ತುಳು ನಾಟಕ ರಂಗಭೂಮಿ ಕುರಿತು ವಿಚಾರಸಂಕಿರಣ ಹಾಗೂ ಹಿರಿಯ ಕವಿ ನಿಟ್ಟೂರು ಸಂಜೀವ ಭಂಡಾರಿ ಸ್ಮರಣಾರ್ಥ ತುಳು ಭಾವಗೀತೆ ಸ್ಪರ್ಧೆ ಜರುಗಲಿದೆ ಎಂದು ಉಡುಪಿ ತುಳುಕೂಟದ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

14ರಂದು ಬೆಳಿಗ್ಗೆ 9ಕ್ಕೆ ಎಂಜಿಎಂ ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ ನಿಟ್ಟೂರು ಸಂಜೀವ ಭಂಡಾರಿ ಸ್ಮರಣಾರ್ಥ ತುಳು ಭಾವಗೀತೆ ಸ್ಪರ್ಧೆ ನಡೆಯಲಿದ್ದು, ಕಾಪು ತಾಲ್ಲೂಕು ಕಸಾಪ ಅಧ್ಯಕ್ಷ ಪುಂಡಲೀಕ ಮರಾಠೆ ಉದ್ಘಾಟಿಸಲಿದ್ದಾರೆ. ತುಳುಕೂಟದ ಸದಸ್ಯ ಪ್ರಕಾಶ್ ಸುವರ್ಣ ಕಟಪಾಡಿ ಅವರ ತುಳು ಭಕ್ತಿ ಹಾಗೂ ಭಾವಗೀತೆ ‘ಬೊಲ್ಪು’ ಕೃತಿಯನ್ನು ಶಿರ್ವ ವಿದ್ಯಾವರ್ಧಕ ಸಂಘದ ಆಡಳಿತಾಧಿಕಾರಿ ಪ್ರೊ.ವೈ.ಭಾಸ್ಕರ್‌ಶೆಟ್ಟಿ ಬಿಡುಗಡೆ ಮಾಡಲಿದ್ದಾರೆ ಎಂದರು.

ಮಧ್ಯಾಹ್ನ 2ಕ್ಕೆ ತುಳು ನಾಟಕ ರಂಗಭೂಮಿ ಕೋಡೆ–ಇನಿ–ಎಲ್ಲೆ ವಿಷಯದ ಕುರಿತು ವಿಚಾರ ಸಂಕಿರಣ ನಡೆಯಲಿದೆ. ರಂಗಕರ್ಮಿ ಎಂ.ಎಸ್‌.ಭಟ್‌, ರಂಗ ನಿರ್ದೇಶಕ ವಿಜಯ್‌ಕುಮಾರ್ ಕೋಡಿಯಾಲ್‌ಬೈಲ್‌, ಕ್ರಿಸ್ಟೋಫರ್ ಮಂಗಳೂರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಸಂಜೆ 5.30ಕ್ಕೆ ರವೀಂದ್ರ ಕಲಾಮಂಟಪದಲ್ಲಿ ನಡೆಯುವ ಕೆಮ್ತೂರು ದೊಡ್ಡಣ್ಣ ಶೆಟ್ಟಿ ಸ್ಮರಣೆ ಕಾರ್ಯಕ್ರಮವನ್ನು ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಸ್‌.ಯಡಪಡಿತ್ತಾಯ ಉದ್ಘಾಟಿಸಲಿದ್ದಾರೆ. ಶಾಸಕ ರಘುಪತಿ ಭಟ್‌, , ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ್ ಜಿ.ಕತ್ತಲ್‌ಸಾರ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ಎಂಜಿಎಂ ಕಾಲೇಜು ಪ್ರಾಂಶುಪಾಲ ಡಾ.ದೇವಿದಾಸ್ ನಾಯ್ಕ್ ಭಾಗವಹಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಸಭಾಕಾರ್ಯಕ್ರಮದ ಬಳಿಕ ವಿಜಯ್‌ಕುಮಾರ್ ಕೊಡಿಯಲಾಲ್‌ಬೈಲ್ ಅವರ ವಿಧಾತ್ರಿ ಕಲಾವಿದರೆ ಕೈಕಂಬ ಅಭಿನಯದ ‘ಒರಿಯರ್ದೊರಿ ಅಸಲ್’ ತುಳು ನಾಟಕ ಪ್ರದರ್ಶನ ನಡೆಯಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಕಾಶ್ ಸುವರ್ಣ ಕಟಪಾಡಿ, ಬಿ.ಪ್ರಭಾಕರ್ ಭಂಡಾರಿ, ತಾರಾ ಉಮೇಶ್ ಆಚಾರ್ಯ, ದಯಾನಂದ ಶೆಟ್ಟಿ ಇದ್ದರು.