ಕರಾವಳಿ ಕ್ರಿಶ್ಚಿಯನ್ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀ: ಅ. 2ರಂದು ವಾರ್ಷಿಕ ಸಹಮಿಲನ ಮತ್ತು ಪ್ರೇರಣ ಪ್ರಶಸ್ತಿ- 2025 ಪ್ರದಾನ ಸಮಾರಂಭ

ಉಡುಪಿ: ಕರಾವಳಿ ಕ್ರಿಶ್ಚಿಯನ್ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀ ಉಡುಪಿ ಜಿಲ್ಲೆ ಇದರ ಸಂಘಟನೆಯ ವಾರ್ಷಿಕ ಸಹಮಿಲನ ಮತ್ತು ಪ್ರೇರಣ ಪ್ರಶಸ್ತಿ- 2025 ಪ್ರದಾನ ಸಮಾರಂಭವು ಅಕ್ಟೋಬರ್ 2 ರಂದು ಕಾರ್ಕಳ ಅತ್ತೂರು ಸಂತ ಲಾರೇನ್ಸ್ ಬೆಸಿಲಿಕಾದ ಸಮುದಾಯ ಸಭಾಭವನದಲ್ಲಿ ನಡೆಯಲಿದೆ ಎಂದು ಸಂಘಟನೆಯ ಅಧ್ಯಕ್ಷರಾದ ಸಂತೋಷ್ ಡಿ’ಸಿಲ್ವಾ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಸಂಜೆ 6ಗಂಟೆಗೆ ನಡೆಯುವ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಕರಾವಳಿ ಕ್ರಿಶ್ಚಿಯನ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಇದರ ಗೌರವಾಧ್ಯಕ್ಷ ಡಾ. ಜೆರಿ ವಿನ್ಸೆಂಟ್ ಡಯಾಸ್ ಉದ್ಘಾಟಿಸಲಿದ್ದಾರೆ.

ಉಡುಪಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಡಾ. ಜೆರಾಲ್ಡ್ ಐಸಾಕ್ ಲೋಬೊ, ಸಿಎಸ್ಐ ಧರ್ಮಾಧ್ಯಕ್ಷ ಹೇಮಚಂದ್ರ ಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ವರ್ಷದ ಉದ್ಯಮಿ ಪ್ರಶಸ್ತಿ 2025 ಅನ್ನು ಉದ್ಯಮಿ ಫ್ರಾನ್ಸಿಸ್ ಡಿ’ಸೋಜಾ, ವರ್ಷದ ಮಹಿಳಾ ಉದ್ಯಮಿ ಪ್ರಶಸ್ತಿ 2025 ಅನ್ನು ಲವಿಟಾ ಅಂದ್ರಾದೆ, ವರ್ಷದ ಯುವ ಉದ್ಯಮಿ ಪ್ರಶಸ್ತಿ 2025 ಅನ್ನು ಅರುಣ್ ಸುಶೀಲ್ ಕೋಟ್ಯಾನ್ ಹಾಗೂ ವರ್ಷದ ಪ್ರಗತಿಪರ ಕೃಷಿಕ ಪ್ರಶಸ್ತಿ 2025 ಅನ್ನು ಡಾ. ಜೋಸೆಫ್ ಲೋಬೋ ಅವರಿಗೆ ಪ್ರದಾನ ಮಾಡಲಾಗುವುದು ಎಂದರು.

ಈ ಸಂಸ್ಥೆಯ ಕಾರ್ಯವ್ಯಾಪ್ತಿ ಕರಾವಳಿ ಭಾಗದ ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಒಳಗೊಂಡಿದ್ದರೂ ಸದ್ಯಕ್ಕೆ ಇದರ ಕಾರ್ಯವ್ಯಾಪ್ತಿಯನ್ನು ಉಡುಪಿ ಜಿಲ್ಲೆಗೆ ಸೀಮಿತಗೊಳಿಸಿದ್ದೇವೆ. ಕ್ರೈಸ್ತ ಸಮಾಜದ ಎಲ್ಲಾ ವರ್ಗಗಳನ್ನು ( ಕೆಥೋಲಿಕ್. ಪ್ರೊಟೆಸ್ಟೆಂಟ್, ಸೀರಿಯನ್ ಒರ್ತೊಡೊಕ್ಸ್ ಹಾಗೂ ಇನ್ನಿತರ) ಒಳಗೊಂಡು ಜಿಲ್ಲೆಯ ಎಲ್ಲಾ ಉದ್ದಿಮೆದಾರರು, ವ್ಯಾಪಾರಸ್ಥರು, ವೃತ್ತಿಪರರು ಹಾಗೂ ಕೃಷಿಕರು ಸದಸ್ಯರಾಗಿತ್ತಾರೆ. ಅಂದು ಕೇವಲ 30 ಜನ ಅಜೀವ ಸದಸ್ಯರಿಂದ ಆರಂಭಗೊಂಡ ಸಂಸ್ಥೆಯು ಇಂದು 170 ಸದಸ್ಯರನ್ನು ಹೊಂದಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಆಲ್ವಿನ್ ಕ್ವಾಡ್ರಸ್, ಖಜಾಂಚಿ ಮ್ಯಾಕ್ಷಿಮ್ ಸ್ಟೇಫನ್ ಸಲ್ಡಾನಾ, ಸಹಕಾರ್ಯದರ್ಶಿ ವಿಲ್ಸನ್ ಡಿಸೋಜಾ, ನಿರ್ದೇಶಕರಾದ ಜೀವನ್ ಸಾಲಿನ್ಸ್ ಉಪಸ್ಥಿತರಿದ್ದರು.