ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಹ್ಯಾಕೋತ್ಸವ 2025 ಸಮಾರೋಪ ಸಮಾರಂಭ

ಉಡುಪಿ, ಬಂಟಕಲ್: ಶ್ರೀ ಮಧ್ವ ವಾದಿರಾಜ ತಾಂತ್ರಿಕ
ಮಹಾ ವಿದ್ಯಾಲಯದಲ್ಲಿ ಆಯೋಜಿಸಿದ್ದ ೩೦ಗಂಟೆಗಳ ಹ್ಯಾಕಥಾನ್ –
ಹ್ಯಾಕೋತ್ಸವ 2025ರ ಸಮಾರೋಪ ಸಮಾರಂಭವು 04 ನವಂಬರ್
2025 ರಂದು ಸಂಸ್ಥೆಯ ಆವರಣದಲ್ಲಿ ನಡೆಯಿತು.

ಬೆಂಗಳೂರಿನ ನಿಯೋಕ್ರಡ್‌ನ ತಂತ್ರಜ್ಞಾನ ವಿಭಾಗದ
ಉಪಾಧ್ಯಕ್ಷರಾದ ರವಿಶಂಕರ್ ನಟೇಶ್‌ಮೂರ್ತಿ ಅವರು
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಇವರು ಹ್ಯಾಕೋತ್ಸವದ ಮೂಲಕ
ವಿದ್ಯಾರ್ಥಿಗಳು ತಮ್ಮ ತಾಂತ್ರಿಕ ಕೌಶಲ್ಯಗಳನ್ನು ಪ್ರದರ್ಶಿಸಲು
ಸರಿಯಾದ ವೇದಿಕೆಯನ್ನು ನೀಡಿದ್ದಕ್ಕಾಗಿ ಕಾಲೇಜನ್ನು ಶ್ಲಾಘಿಸಿದರು.
ವಿದ್ಯಾರ್ಥಿಗಳು ತಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಪರಿಣತಿಯನ್ನು
ಪಡೆಯುವಂತೆ ಸಲಹೆ ನೀಡಿದರು. ಇದು ಅವರ ವೃತ್ತಿ ಜೀವನದಲ್ಲಿ
ಉನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತದೆ ಎಂದರು.

ಶ್ರೀ ಸೋದೆ ವಾದಿರಾಜ ಮಠ ಶಿಕ್ಷಣ ಪ್ರತಿಷ್ಠಾನ ಇದರ
ಕಾರ್ಯದರ್ಶಿಗಳಾದ ಶ್ರೀರತ್ನಕುಮಾರ್ ಸಮಾರಂಭದ ಅಧ್ಯಕ್ಷತೆ
ವಹಿಸಿದ್ದರು. ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ
ಕಾರ್ಯಕ್ರಮವನ್ನು ಪ್ರಾಯೋಜಿಸಿದ ಎಲ್ಲಾ ಕಂಪೆನಿಗಳಿಗೆ
ಧನ್ಯವಾದಗಳನ್ನು ಸಮರ್ಪಿಸಿದರು. 15 ವರ್ಷಗಳಲ್ಲಿ ಸಂಸ್ಥೆಯು
ಸಾಗಿ ಬಂದ ಹಾದಿಯಲ್ಲಿ ಸ್ವಾಯತ್ತ ಸಂಸ್ಥೆಯಾಗಿ ಇಂತಹ
ಕಾರ್ಯಕ್ರಮಗಳನ್ನು ಆಯೋಜಿಸುವ ಅಗತ್ಯವನ್ನು ತಿಳಿಸಿದರು.
ಮೈಸೂರಿನ ಜೆಎಸ್‌ಎಸ್ ವಿಜ್ಞಾನ ಮತ್ತು ತಾಂತ್ರಿಕ ವಿದ್ಯಾಲಯದ ಕೋಡ್ ಫೋರ್ಜ್ ತಂಡವು ರೂ. 35,000 ನಗದು ಬಹುಮಾನದೊಂದಿಗೆ ಪ್ರಥಮ ಸ್ಥಾನ ಮತ್ತು ಪಿ ಎ ಇಂಜಿನಿಯರಿಂಗ್ ಕಾಲೇಜಿನ ಅಬ್ರ ಕೋಡ್ ಅಬ್ರ ತಂಡವು ರೂ.25,000 ನಗದು ಬಹುಮಾನದೊಂದಿಗೆ ದ್ವಿತೀಯ ಸ್ಥಾನ ಪಡೆದುಕೊಂಡಿತು.

ಮೈಸೂರಿನ ಶ್ರೀ ಜಯಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜಿನಿಂದ ಟೆಕ್ ಗುಡ್ ತಂಡ, ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜು ಮತ್ತು ಜೆ ಎಸ್ ಎಸ್ ಟಿ ವಿಶ್ವ ವಿದ್ಯಾಲಯದಿಂದ ನ್ಯೂರಾಟ್ರಾನ್ ತಂಡ, ಬೆಂಗಳೂರಿನ ದಯಾನಂದ ಸಾಗರ್ ಇಂಜಿನಿಯರಿಂಗ್ ಕಾಲೇಜಿನ ಸೇಪಿಯಂಟ್ ಸ್ಕಾಲರ್ಸ್ ತಂಡ, ಮೂಡಬಿದ್ರಿಯ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ
ಫುಲ್‌ಸ್ಟ್ಯಾಕ್ ಆಲ್ಕೆಮಿಸ್ಟ್ ತಂಡಗಳಿಗೆ ನವೀನ ವಿನ್ಯಾಸಗಳು ಎಂಬ
ವರ್ಗದಲ್ಲಿ ಪ್ರಶಸ್ತಿಯನ್ನು ನೀಡಲಾಯಿತು.

ಸೋದೆ ಶಿಕ್ಷಣ ಸಮೂಹ ಸಂಸ್ಥೆಗಳ ಮುಖ್ಯ
ಕಾರ್ಯನಿರ್ವಹಣಾಧಿಕಾರಿಗಳಾದ ಡಾ. ರಾಧಕೃಷ್ಣ ಎಸ್ ಐತಾಳ್ ಮತ್ತು
ಡೀನ್ ಡಾ. ನಾಗರಾಜ್ ಭಟ್ ಮತ್ತು ಕಾರ್ಯಕ್ರಮದ ವಿದ್ಯಾರ್ಥಿ
ಸಂಯೋಜಕ ಶ್ರೀ ಸುಮೇದ್ ನಾವಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.