ಪೊದೆಗೆ ಮಗು ಎಸೆದ ಪ್ರಕರಣ: ಮಹಿಳೆ ಸಹಿತ ಇಬ್ಬರ ಬಂಧನ

ಕುಂದಾಪುರ: ಪೊದೆಗೆ ನವಜಾತ ಶಿಶುವನ್ನು ಎಸೆದ ಪ್ರಕರಣಕ್ಕೆ ಸಂಬಂಧಿಸಿ ಮಹಿಳೆ ಸೇರಿದಂತೆ ಇಬ್ಬರನ್ನು ಅಮಾಸೆಬೈಲು ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಬಂಧಿತರನ್ನು ಕೊಲ್ಲೂರು ಸಮೀಪದ ಜಡ್ಕಲ್-ಮುದೂರಿನ ರಾಧಾ(40) ಹಾಗೂ ಸತೀಶ್ (43) ಎಂದು ಗುರುತಿಸಲಾಗಿದೆ.

ಇವರಿಬ್ಬರು ಎಸ್ಟೇಟ್ವೊಂದರಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡಿಕೊಂಡಿದ್ದು, ಇಬ್ಬರಿಗೂ ಬೇರೆ ಬೇರೆ ವಿವಾಹವಾಗಿದೆ. ಆದರೆ ತಮ್ಮ ಪತಿ ಪತ್ನಿಯನ್ನು ತೊರೆದಿರುವ ಇವರಿಬ್ಬರು ಕಳೆದ ಒಂದು ವರ್ಷದಿಂದ ಅನ್ಯೋನ್ಯವಾಗಿದ್ದರು. ಈ ನಡುವೆ ಅಕ್ರಮ ಸಂಬಂಧದಿಂದ ಗರ್ಭಿಣಿಯಾಗಿದ್ದ ರಾಧಾ, ಹಾಲಾಡಿ ಬಳಿಯ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದಳು. ಬಳಿಕ ಮಗು ಬೇಡವೆಂದು ನಿರ್ಧರಿಸಿದ ಇವರಿಬ್ಬರು ದ್ವಿಚಕ್ರ ವಾಹನದಲ್ಲಿ ಬಂದು ಮಗುವನ್ನು ಪೊದೆಗೆ ಎಸೆದು ಹೋಗಿದ್ದರು.

ಡಿ.1ರಂದು ಸಂಜೆ 4.30ರ ಸುಮಾರಿಗೆ ಮಚ್ಚಟ್ಟು ಮಡಿವಾಳಕಟ್ಟುವಿನ ಗೀತಾ ಎಂಬವರು ಡೈರಿಗೆ ಹಾಲು ಕೊಡಲು ಹೋಗುವಾಗ ಪೊದೆಯ ಒಳಗೆ ಮಗು ಅಳುವ ಧ್ವನಿ ಕೇಳಿಸಿತ್ತು. ಹಾಗೆ ಪೊದೆ ಬಳಿ ಹೋಗಿ ನೋಡಿದಾಗ ಸುಮಾರು 7 ದಿನಗಳ ನವಜಾತ ಹೆಣ್ಣು ಶಿಶು ಪತ್ತೆಯಾಗಿತ್ತು. ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಿದ ಪೊಲೀಸರು ಎರಡೇ ದಿನಗಳ ಒಳಗೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸದ್ಯ ಮಗು ಸುರಕ್ಷಿತವಾಗಿದ್ದು, ಮಕ್ಕಳ ರಕ್ಷಣಾ ಘಟಕ, ಮಕ್ಕಳ ಕಲ್ಯಾಣ ಸಮಿತಿಗೆ ಮುಂದಿನ ಕ್ರಮಕ್ಕಾಗಿ ಒಪ್ಪಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.