ನವದೆಹಲಿ: ಇಂದು ಜಸ್ಟೀಸ್ ಸೂರ್ಯಕಾಂತ್ (Surya kant) ಅವರನ್ನು ಸುಪ್ರೀಂ ಕೋರ್ಟ್ನ 53ನೇ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡಲಾಯಿತು. ಕೇಂದ್ರ ಕಾನೂನು ಸಚಿವಾಲಯ ನೇಮಕಾತಿ ಆದೇಶಗಳನ್ನು ಹೊರಡಿಸಿದ್ದು, ನ್ಯಾಯಮೂರ್ತಿ ಸೂರ್ಯಕಾಂತ್ ಅವರು ಇದೇ ನವೆಂಬರ್ 24 ರಂದು ಸಿಜೆಐ ಆಗಿ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ತಿಳಿಸಿದೆ.
ಫೆಬ್ರವರಿ 9, 2027 ರವರೆಗೆ ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿಯಾಗಿ ಸೂರ್ಯಕಾಂತ್ ಮುಂದುವರಿಯಲಿದ್ದಾರೆ. ಈ ಮಧ್ಯೆ, ಪ್ರಸ್ತುತ ಮುಖ್ಯ ನ್ಯಾಯಮೂರ್ತಿ ಭೂಷಣ್ ರಾಮಕೃಷ್ಣ ಗವಾಯಿ ಅವರು ನವೆಂಬರ್ 23ರಂದು ನಿವೃತ್ತಿ ಹೊಂದಲಿದ್ದಾರೆ. ತದನಂತರ ಸಿಜೆಐ ಆಗಿ ಸೂರ್ಯಕಾಂತ್ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಸೂರ್ಯಕಾಂತ್ ಅವರ ಹಿನ್ನಲೆ ಏನು?
ಸೂರ್ಯಕಾಂತ್ ಅವರು ಫೆಬ್ರವರಿ 10, 1962ರಂದು ಹರಿಯಾಣದ ಹಸ್ಸರ್ ಜಿಲ್ಲೆಯ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದರು. ಮೇ 24, 2019ರಂದು ಸುಪ್ರೀಂ ಕೋರ್ಟ್ನ ನ್ಯಾಯಾಧೀಶರಾಗಿ ಬಡ್ತಿ ಪಡೆದರು. ಸೂರ್ಯಕಾಂತ್ ಹರಿಯಾಣದ ಕುರುಕ್ಷೇತ್ರ ವಿಶ್ವವಿದ್ಯಾಲಯದಿಂದ ತಮ್ಮ ಎಲ್ಎಲ್ಬಿ ಪದವಿ ಪಡೆದಿದ್ದಾರೆ.
1984ರಲ್ಲಿ ಹರಿಯಾಣ ಮತ್ತು ಪಂಜಾಬ್ ಹೈಕೋರ್ಟ್ನಲ್ಲಿ ವಕೀಲರಾಗಿ ಅಭ್ಯಾಸ ಮಾಡಲು ಪ್ರಾರಂಭಿಸಿದ ಅವರು, 2004ರಲ್ಲಿ ಹೈಕೋರ್ಟ್ ನ್ಯಾಯಾಧೀಶರಾಗಿ ಮತ್ತು 2019ರಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ಬಡ್ತಿ ಪಡೆದವರು. ಇದಲ್ಲದೆ, ಅವರನ್ನು ಇತ್ತೀಚೆಗೆ NALSA (ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ) ಕಾರ್ಯನಿರ್ವಾಹಕ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಇದೀಗ ಸುಪ್ರೀಂ ಕೋರ್ಟ್ನ 53ನೇ ಸಿಜೆಐ ಆಗಿ ನೇಮಕಗೊಂಡಿದ್ದು, ಸುಮಾರು 15 ತಿಂಗಳುಗಳ ಕಾಲ ಸೇವೆ ಸಲ್ಲಿಸಿದ ಬಳಿಕ 2027ರ ಫೆಬ್ರವರಿ 9ರಂದು ಅವರು ನಿವೃತ್ತಿ ಹೊಂದಲಿದ್ದಾರೆ.
ಏನೆಲ್ಲ ಆಸ್ತಿ?
ಸುಪ್ರೀಂ ಕೋರ್ಟ್ ವೆಬ್ಸೈಟ್ನಲ್ಲಿ ಒದಗಿಸಲಾದ ವಿವರಗಳ ಪ್ರಕಾರ, ನ್ಯಾ. ಸೂರ್ಯಕಾಂತ್ ಹಲವಾರು ಸ್ಥಿರ ಆಸ್ತಿಗಳನ್ನು ಹೊಂದಿದ್ದಾರೆ. ಅವರು ಚಂಡೀಗಢದ ಸೆಕ್ಟರ್ 10ರಲ್ಲಿ ಒಂದು ಭವ್ಯವಾದ ಮನೆಯನ್ನು ಖರೀದಿಸಿದ್ದಾರೆ. ಪಂಚಕುಲ ಜಿಲ್ಲೆಯ ಗೋಲ್ಪುರ ಗ್ರಾಮದಲ್ಲಿ 13.5 ಎಕರೆ ಕೃಷಿ ಭೂಮಿ, ಗುರುಗ್ರಾಮ್ನ ಸುಶಾಂತ್ ಲೋಕ್ನಲ್ಲಿರುವ ಡಿಎಲ್ಎಫ್ ಹಂತ 2ರಲ್ಲಿ ಎರಡು ಮನೆಗಳು ಮತ್ತು ಸೆಕ್ಟರ್ 18 ‘ಸಿ’ನಲ್ಲಿ ಮತ್ತೊಂದು ಮನೆಯನ್ನು ಖರೀದಿಸಿದ್ದಾರೆ.ಸೂರ್ಯಕಾಂತ್ ಹಿಸಾರ್ನಲ್ಲಿ ಕೃಷಿ ಭೂಮಿ ಮತ್ತು ಪಿತ್ರಾರ್ಜಿತ ಆಸ್ತಿಗಳನ್ನು ಹೊಂದಿದ್ದಾರೆ. ಅವರ ಪತ್ನಿಗೆ ಹೊಸ ಚಂಡೀಗಢದ ಇಕೋ-ಸಿಟಿಯಲ್ಲಿ 500 ಚದರ ಗಜಗಳ ಜಮೀನಿದೆ. ಅವರು ದೆಹಲಿ-ಎನ್ಸಿಆರ್ನಿಂದ ಹರಿಯಾಣದ ಹಳ್ಳಿಗಳವರೆಗೆ ಹಲವಾರು ಆಸ್ತಿಯನ್ನು ಹೊಂದಿದ್ದಾರೆ. ಇಷ್ಟೇ ಅಲ್ಲ, ಸೂರ್ಯಕಾಂತ್ ಅವರು 4.1 ಮಿಲಿಯನ್ (ಸುಮಾರು 1.7 ಮಿಲಿಯನ್ ಡಾಲರ್) ರೂ.ಗಿಂತ ಹೆಚ್ಚಿನ ಮೌಲ್ಯದ 16 ಸ್ಥಿರ ಠೇವಣಿಗಳನ್ನು ಹೊಂದಿದ್ದಾರೆ. ಸುಮಾರು 300 ಗ್ರಾಂ ಚಿನ್ನ, 6 ಕೆಜಿ ಬೆಳ್ಳಿ ಮತ್ತು ಇತರ ಕೆಲವು ಬೆಲೆಬಾಳುವ ವಸ್ತುಗಳು ಸಹ ಇವೆ.
ಇನ್ನು ವಾಹನಗಳ ವಿಷಯಕ್ಕೆ ಬಂದರೆ, ನ್ಯಾಯಮೂರ್ತಿ ಸೂರ್ಯಕಾಂತ್ ಅವರ ಬಳಿ ಕೇವಲ ವ್ಯಾಗನ್ಆರ್ ಕಾರು ಮಾತ್ರವಿದೆ. ಇದು ಅವರ ಸರಳ ಜೀವನಶೈಲಿಯನ್ನು ಪ್ರತಿಬಿಂಬಿಸುತ್ತದೆ. ಇದಲ್ಲದೆ, ಈ ಆಸ್ತಿಗಳಲ್ಲಿ ಐಷಾರಾಮಿ ವಾಹನಗಳು, ತೋಟದ ಮನೆಗಳು ಅಥವಾ ವಿದೇಶಿ ಹೂಡಿಕೆಗಳು ಯಾವುದೂ ಇಲ್ಲ ಎಂದು ವರದಿಯಾಗಿದೆ.


















