ನ್ಯಾಯಮಂಡಳಿಗಳನ್ನು ದುರ್ಬಲಗೊಳಿಸುತ್ತಿರುವ ಕೇಂದ್ರ ಸರ್ಕಾರ: ಸುಪ್ರೀಂ ಕೋರ್ಟ್

ನವದೆಹಲಿ: ಅಗತ್ಯ ಇರುವ ನ್ಯಾಯಾಂಗ ಅಧಿಕಾರಿಗಳು ಮತ್ತು ತಾಂತ್ರಿಕ ಸದಸ್ಯರ ನೇಮಕಾತಿಯನ್ನು ಮಾಡದಿರುವ ವಿಚಾರಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್‌, ಕೇಂದ್ರ ಸರ್ಕಾರಕ್ಕೆ ಚಾಟಿಬೀಸಿದೆ.

ಸರ್ಕಾರವು ಅಗತ್ಯ ನೇಮಕಾತಿ ಮಾಡದೆ ನ್ಯಾಯಮಂಡಳಿಗಳನ್ನು ದುರ್ಬಲಗೊಳಿಸುವ ಪ್ರಯತ್ನವನ್ನು ಮಾಡುತ್ತಿದೆ ಎಂದು ಸುಪ್ರೀಂ ಕೋರ್ಟ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಈ ವಿಷಯದಲ್ಲಿ ಸರ್ಕಾರದ ಜತೆ ಸಂಘರ್ಷ ನಡೆಸಲು ನ್ಯಾಯಾಲಯ ಬಯಸುವುದಿಲ್ಲ. ಆದರೆ, ಅಪಾರ ಸಂಖ್ಯೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಮಾಡಲು ಕೇಂದ್ರ ಸರ್ಕಾರ ಮುಂದಾಗಬೇಕು ಎಂದು ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ ಅವರನ್ನೊಳಗೊಂಡ ವಿಶೇಷ ಪೀಠವು ನಿರ್ದೇಶನ ನೀಡಿದೆ.

ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ(ಎನ್‌ಸಿಎಲ್‌ಟಿ) ಸೇರಿದಂತೆ ಪ್ರಮುಖ ನ್ಯಾಯಮಂಡಳಿಗಳಲ್ಲಿ 250ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಉಳಿದಿವೆ.

ಈ ನ್ಯಾಯಾಲಯದ ತೀರ್ಪಿಗೆ ಗೌರವ ನೀಡಲು ಕೇಂದ್ರ ಸರ್ಕಾರ ಬಯಸುವುದಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಹೀಗಾಗಿ, ನ್ಯಾಯಮಂಡಳಿ ಸುಧಾರಣೆ ಕಾಯ್ದೆಗೆ ತಡೆ ನೀಡುವ ಆಯ್ಕೆ ನಮ್ಮದಾಗಲಿದೆ ಅಥವಾ ನ್ಯಾಯಮಂಡಳಿಗಳನ್ನು ಮುಚ್ಚುತ್ತೇವೆ ಅಥವಾ ನಾವೇ ನೇಮಿಸುತ್ತೇವೆ. ಇಲ್ಲದಿದ್ದರೆ ನ್ಯಾಯಾಂಗ ನಿಂದನೆ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ಪೀಠವು ಕಟುವಾಗಿ ಹೇಳಿದೆ.

ನ್ಯಾಯಮಂಡಳಿಗಳಲ್ಲಿರುವ ಖಾಲಿ ಹುದ್ದೆಗಳು ಮತ್ತು ಹೊಸ ಕಾನೂನಿಗೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ಹಲವು ಅರ್ಜಿಗಳ ವಿಚಾರಣೆಯನ್ನು ಸೆಪ್ಟೆಂಬರ್‌ 13ಕ್ಕೆ ಮಂದೂಡಿದ ನ್ಯಾಯಾಲಯವು, ಈ ಅವಧಿ ಒಳಗೆ ನೇಮಕಾತಿಗಳನ್ನು ಮಾಡುವ ಆಶಾಭಾವ ನಮಗಿದೆ ಎಂದು ಹೇಳಿದೆ.