ಬೈಂದೂರು: ಟಯರ್ ಸ್ಫೋಟಗೊಂಡು ಸೇತುವೆ ಮೇಲೆಯೇ ಹೊತ್ತಿಉರಿದ ಲಾರಿ- ಲಕ್ಷಾಂತರ ರೂ. ನಷ್ಟ

ಉಡುಪಿ: ಟಯರ್ ಸ್ಫೋಟಗೊಂಡು ಲಾರಿಯೊಂದು ಸೇತುವೆ ಮೇಲೆ ಹೊತ್ತಿ ಉರಿದ ಘಟನೆ ಗುರುವಾರ ಮಧ್ಯರಾತ್ರಿ ಬೈಂದೂರಿನ ಉಪ್ಪುಂದ-ಬಿಜೂರು ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಸಂಭವಿಸಿದೆ.

ಧಾರವಾಡದಿಂದ ಕುಂದಾಪುರಕ್ಕೆ ಪಶು ಆಹಾರವನ್ನು ಸಾಗಿಸುತ್ತಿದ್ದ ಲಾರಿಯು ರಾತ್ರಿ 1ಗಂಟೆ ಸುಮಾರಿಗೆ ಬಿಜೂರು ಬಳಿ ಆಗಮಿಸುತ್ತಿದ್ದ ವೇಳೆ ಅದರ ಹಿಂಬದಿಯ ಟಯರ್ ಸ್ಫೋಟಗೊಂಡು ಬೆಂಕಿ ಹತ್ತಿಕೊಂಡಿದೆ. ಕ್ಷಣಾರ್ಧದಲ್ಲಿ ಲಾರಿ ಹೊತ್ತಿಉರಿದಿದ್ದು, ಭಾಗಶಃ ಲಾರಿ ಸಹಿತ ಒಳಗಿದ್ದ ಪಶು ಆಹಾರಗಳು ಬೆಂಕಿಗಾಹುತಿಯಾಗಿದೆ. ಇದರಿಂದ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.

ಲಾರಿ ಚಾಲಕ ಚಂದ್ರಕಾಂತ್ ಎನ್ನುವರು ಅಪಾಯದಿಂದ ಪಾರಾಗಿದ್ದಾರೆ. ಸೇತುವೆ ಮೇಲೆ ಲಾರಿಗೆ ಬೆಂಕಿ ಹಿಡಿದು ಹೊತ್ತಿ ಉರಿದ ಕಾರಣ ಒಂದಷ್ಟು ಕಾಲ ಸಂಚಾರಕ್ಕೆ ಅಡಚಣೆಯಾಯಿತು. ಪೊಲೀಸರು ಸ್ಥಳಕ್ಕಾಗಮಿಸಿ ಯಡ್ತರೆ ಜಂಕ್ಷನ್ ಬಳಿ ತಿರುವು ನೀಡಿ ವಾಹನಗಳು ಹೆದ್ದಾರಿಯ ಇನ್ನೊಂದು ರಸ್ತೆ ಮೂಲಕ ಸಾಗಲು ಅನುವು ಮಾಡಿಕೊಟ್ಟರು.