ಹೈಕಮಾಂಡ್ ಜತೆಗಿನ ಒಪ್ಪಂದಂತೆ ಬಿಎಸ್ ವೈ ರಾಜೀನಾಮೆ: ಸಂಸದ ಶ್ರೀನಿವಾಸ ಪ್ರಸಾದ್ ಸ್ಫೋಟಕ ಹೇಳಿಕೆ

ಚಾಮರಾಜನಗರ: ಬಿಜೆಪಿ ಸರ್ಕಾರ ರಚನೆ ಆದಂತಹ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಗೂ ಹೈಕಮಾಂಡ್‌ ನಡುವೆ ಆಗಿದ್ದ ಒಪ್ಪಂದದಂತೆ ಯಡಿಯೂರಪ್ಪ ಅವರು ಈಗ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎಂದು ಸಂಸದ ವಿ.ಶ್ರೀನಿವಾಸ ಪ್ರಸಾದ್‌ ಹೇಳಿದರು.

ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 75 ವರ್ಷ ಆದವರು ಮುಖ್ಯ ಹುದ್ದೆಗಳಲ್ಲಿ ಇರಬಾರದು ಎಂಬುದು ಪಕ್ಷದ ನಿಲುವು. ಹಾಗಿದ್ದರೂ ಸಮ್ಮಿಶ್ರ ಸರ್ಕಾರ ಪತನಗೊಂಡಾಗ ಯಡಿಯೂರಪ್ಪ ಮುಖ್ಯಮಂತ್ರಿ ಆದರು. ಅವರಿಗೆ ವಯಸ್ಸಾಗಿದ್ದರೂ, ಎರಡು ವರ್ಷಗಳ ಕಾಲ ಮುಖ್ಯಮಂತ್ರಿಯಾಗಲು ಹೈಕಮಾಂಡ್ ಅವಕಾಶ ಕೊಟ್ಟಿತ್ತು. ಅಂದು ನಡೆದ ಮಾತುಕತೆಯಂತೆ ಯಡಿಯೂರಪ್ಪ ಅವರು ಈಗ ನಡೆದುಕೊಳ್ಳುತ್ತಿದ್ದಾರೆ ಎಂದರು.

ಹೊಸ ಮುಖ್ಯಮಂತ್ರಿ ಯಾರು ಎಂಬುದು ಇನ್ನು ಎರಡು ದಿನಗಳಲ್ಲಿ ಗೊತ್ತಾಗಲಿದೆ. ಇದನ್ನು ಈಗಲೇ ಊಹಿಸಲು ಸಾಧ್ಯವಿಲ್ಲ. ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ಹೈಕಮಾಂಡ್‌ ನಿರ್ಧರಿಸುತ್ತದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.