ಬೆಂಗಳೂರು: ದರೋಡೆಕೋರರನ್ನು ಬರೀ 15 ನಿಮಿಷದಲ್ಲೇ ಹಿಡಿದ ಪೊಲೀಸರು!

ಬೆಂಗಳೂರು: ದಂಪತಿ ಮತ್ತು ಅಡಿಕೆ ವ್ಯಾಪಾರಿಯನ್ನು ಸಿನಿಮೀಯ ರೀತಿಯಲ್ಲಿ ಅಪಹರಿಸಿ 1.10 ಕೋಟಿ ರೂ. ನಗದು ದೋಚಿದ್ದ ದರೋಡೆಕೋರರನ್ನು ಘಟನೆ ನಡೆದ ಕೆಲವೇ ಸಮಯದಲ್ಲಿ ಬಂಧಿಸುವಲ್ಲಿ ಹುಳಿಮಾವು ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ನರಸಿಂಹ(30), ಜೀವನ್(28), ಕುಮಾರ್(33), ವೆಂಕಟರಾಜು(32), ಕಿಶೋರ್(32), ನಮನ್(19), ರವಿಕಿರಣ್(30), ಚಂದ್ರು(34) ಬಂಧಿತರು. ಆರೋಪಿಗಳು ಜಿಗಣಿ, ಬೇಗೂರು ಮತ್ತು ಚಂದಾಪುರ ನಿವಾಸಿಗಳಾಗಿದ್ದಾರೆ. ಬಹುತೇಕರು ಸೆಕ್ಯೂರಿಟಿ ಗಾರ್ಡ್ ಕೆಲಸದ ಜತೆಗೆ ಸ್ವಿಗ್ಗಿ ಡೆಲಿವರಿ ಬಾಯ್‌ಗಳಾಗಿ ಹಾಗೂ ಇತರೆ ಸಣ್ಣ-ಪುಟ್ಟ ಕೆಲಸ ಮಾಡಿಕೊಂಡಿದ್ದಾರೆ.

ಈ ಪೈಕಿ ಆರೋಪಿಗಳಾದ ವೆಂಕಟರಾಜು ಮತ್ತು ಕಿಶೋರ್ ವಿರುದ್ಧ ಗ್ರಾಮಾಂತರ ಭಾಗದ ಠಾಣೆಯೊಂದರಲ್ಲಿ ಕೊಲೆ, ದರೋಡೆ ಪ್ರಕರಣ ದಾಖಲಾಗಿದೆ. ತುಮಕೂರು ಮೂಲದ ಹೇಮಂತ್ ಮತ್ತು ಅಕ್ಷಯನಗರ ನಿವಾಸಿ ಮೋಟರಾಮು ದಂಪತಿಯನ್ನು ಅಪಹರಿಸಿ ನಗದು ಹಣ ದರೋಡೆ ಮಾಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತುಮಕೂರು ಮೂಲದ ಅಡಿಕೆ ವ್ಯಾಪಾರಿ ಮೋಹನ್ ಎಂಬುವರು ಆನೇಕಲ್ ಭಾಗದಲ್ಲಿ ಆಸ್ತಿಯೊಂದನ್ನು 1.75 ಕೋಟಿ ರೂ.ಗೆ ವ್ಯಕ್ತಿಯೊಬ್ಬರಿಗೆ ಮಾರಿದ್ದರು. ಈ ಪೈಕಿ 1.10 ಕೋಟಿ ರೂ. ಅನ್ನು ತನ್ನ ಚಿಕ್ಕಪ್ಪನ ಮಗ ಹೇಮಂತ್‌ಗೆ ಪಡೆದುಕೊಂಡು ಬರುವಂತೆ ಸೂಚಿಸಿದ್ದರು. ಅದರಂತೆ ಸೆ.27 ರಂದು ರಾತ್ರಿ 10:15 ಕ್ಕೆ ಸುಮಾರಿಗೆ ಹುಳಿಮಾವು ಅಕ್ಷಯನಗರದ ಬಳಿ ಕಾರಿನಲ್ಲಿ ಬಂದಿದ್ದಾರೆ. ಅದೇ ವೇಳೆ ಹಣ ಕೊಡಲು ಮೋಟರಾಮು ದಂಪತಿ ಮತ್ತೊಂದು ಕಾರಿನಲ್ಲಿ ಬಂದಿದ್ದು, ನಂತರ ಹೇಮಂತ್, ಹಣದ ಸಮೇತ ಮೋಟರಾಮು ಕಾರಿನಲ್ಲಿ ಕುಳಿತುಕೊಂಡಿದ್ದಾರೆ.

ಅದೇ ವೇಳೆ ಅಲ್ಲೇ ಇದ್ದ ಆರೋಪಿಗಳ ಪೈಕಿ ಇಬ್ಬರು, ಅವರ ಚಲವಲನಗಳ ಮೇಲೆ ಅನುಮಾನಗೊಂಡು ಪ್ರಶ್ನಿಸಿದ್ದಾರೆ. ನೀವು ಯಾರು? ಕಾರಿನಿಂದ ಕೆಳಗೆ ಇಳಿಯಿರಿ? ತಪಾಸಣೆ ಮಾಡಬೇಕೆಂದು ವಿಡಿಯೋ ಮಾಡಲು ಮುಂದಾಗಿದ್ದಾರೆ. ಅದನ್ನು ಪ್ರಶ್ನಿಸಿದ ಹೇಮಂತ್ ಮತ್ತು ಮೋಟರಾಮು ದಂಪತಿ ಮೇಲೆ ಹಲ್ಲೆ ನಡೆಸಿ ಹಣ ಕಸಿದುಕೊಳ್ಳಲು ಮುಂದಾಗಿದ್ದರು. ಇದರಿಂದ ಗಾಬರಿಗೊಂಡ ಮೂವರು ಕಾರಿನ ಡೋರ್ ಲಾಕ್ ಮಾಡಿಕೊಂಡು ತಪ್ಪಿಸಿಕೊಳ್ಳಲು ಮುಂದಾಗಿದ್ದಾರೆ. ಆದರೆ, ಆರೋಪಿಗಳು ಬೈಕ್‌ನಲ್ಲಿ ಹಿಂಬಾಲಿಸಿ, ಬೈಕ್‌ನಿಂದ ಗುದ್ದಿಸಿದ್ದಾರೆ. ಬಳಿಕ ನಿರ್ಜನ ಪ್ರದೇಶಕ್ಕೆ ಹೋಗುವಂತೆ ಮಾಡಿ, ಅಲ್ಲಿಯೇ ಅಡ್ಡಗಟ್ಟಿದ್ದಾರೆ. ಬಳಿಕ ಮೂವರನ್ನು ಕಾರಿನಿಂದ ಇಳಿಸಿ, ಮೊಬೈಲ್ ಕಿತ್ತುಕೊಂಡು ಅಲ್ಲೇ ಇದ್ದ ಖಾಲಿ ಶೆಡ್‌ನಲ್ಲಿ ಕೂಡಿ ಹಾಕಲು ಮುಂದಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

20 ಲಕ್ಷ ರೂ.ಗೆ ಬ್ಲಾಕ್‌ ಮೇಲ್

ಆನಂತರ ಇತರೆ ಆರು ಮಂದಿ ಆರೋಪಿಗಳು ಸ್ಥಳಕ್ಕೆ ಬಂದಿದ್ದು, ಎಂಟು ಮಂದಿಯೂ 20 ಲಕ್ಷ ರೂ. ಕೊಟ್ಟರೆ ಬಿಟ್ಟು ಬಿಡುತ್ತೇವೆ. ಇಲ್ಲವಾದರೆ ಬ್ಲಾಕ್ ಆ್ಯಂಡ್ ವೈಟ್ ದಂಧೆ ಮಾಡುತ್ತಿದ್ದಾರೆ ಎಂದು ಪೊಲೀಸರಿಗೆ ತಿಳಿಸುತ್ತೇವೆ ಎಂದು ಬ್ಲಾಕ್‌ ಮೇಲ್ ಮಾಡಿದ್ದಾರೆ. ಇದೇ ವೇಳೆ ಎಲೆಕ್ಟ್ರಾನಿಕ್ ಸಿಟಿ ಉಪವಿಭಾಗದ ಎಸಿಪಿ ಕೆ.ಎಂ.ಸತೀಶ್ ಮತ್ತು ಹುಳಿಮಾವು ಠಾಣೆಯ ಪಿಐ ಬಿ.ಜಿ.ಕುಮಾರಸ್ವಾಮಿ ಠಾಣೆ ವ್ಯಾಪ್ತಿಯಲ್ಲಿ ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದರು.