ದಸರಾ ಬಳಿಕ 1ರಿಂದ 5ನೇ ತರಗತಿ ಆರಂಭ: ಶಿಕ್ಷಣ ಸಚಿವ ಬಿ.ಸಿ. ನಾಗೇಶ್

ಉಡುಪಿ: ಒಂದರಿಂದ ಐದನೇ ತರಗತಿಯ ಮಕ್ಕಳಿಗೆ ದಸರಾ ಹಬ್ಬದ ಬಳಿಕ ಶಾಲಾ ತರಗತಿಗಳನ್ನು ಆರಂಭಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಉಡುಪಿಯಲ್ಲಿ ತಿಳಿಸಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈವರೆಗೆ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಶಾಲಾ ಹಾಜರಾತಿ ಕಡ್ಡಾಯಗೊಳಿಸಿಲ್ಲ. ದಸರಾ ಮುಗಿದ ತಕ್ಷಣ 1 ರಿಂದ 5ನೇ ತರಗತಿಗಳನ್ನು ಆರಂಭಿಸಲಾಗುತ್ತಿದ್ದು, ಅವರಿಗೂ ಹಾಜರಾತಿ ಕಡ್ಡಾಯವಿಲ್ಲ ಎಂದರು.

ಶಾಲೆ ಆರಂಭಗೊಂಡರೂ ಆಫ್ ಲೈನ್, ಆನ್ ಲೈನ್ ತರಗತಿಗಳು ನಡೆಯಲಿವೆ. ಗ್ರಾಮೀಣ ಭಾಗದಲ್ಲಿ ಶೇ.90ರಷ್ಟು ಹಾಜರಾತಿ ಇದೆ. ಆನ್ ಲೈನ್ ಕ್ಲಾಸ್ ನಿಂದ ಗ್ರಾಮೀಣ ವಿದ್ಯಾರ್ಥಿಗಳಿಗೆ ತೊಂದರೆ ಕೂಡ ಆಗಿದೆ. ಬಿಸಿಯೂಟವನ್ನು ಕೂಡ ಆರಂಭಿಸಲಾಗುವುದು ಎಂದು ಸಚಿವರು ತಿಳಿಸಿದರು.