ಬೆಂಗಳೂರು: ಪುರುಷರ ಶೌಚಾಲಯದಲ್ಲಿ ತನ್ನ ಸೀನಿಯರ್ ವಿದ್ಯಾರ್ಥಿನಿಯ ( Student ) ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ 21 ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಯನ್ನು ಬಂಧಿಸಿರುವ ಘಟನೆ ಬೆಂಗಳೂರಿನ ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದಿದೆ.ಬಂಧಿತ ಯುವಕನನ್ನು ಜೀವನ್ ಗೌಡ ಎಂದು ಗುರುತಿಸಲಾಗಿದೆ. ಈತ ಆರನೇ ಸಮಿಸ್ಟರ್ನ ವಿದ್ಯಾರ್ಥಿ. ಆತನನ್ನು ಬೆಂಗಳೂರು ಪೊಲೀಸರು ಬುಧವಾರ (ಅ.15) ತಮ್ಮ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಅಂದಿನಿಂದ ಆತ ನ್ಯಾಯಾಂಗದ ವಶದಲ್ಲಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಂದಹಾಗೆ, ಈ ಘಟನೆ ಅ.10ರಂದು ನಡೆದಿದೆ. ಸಂತ್ರಸ್ತೆ ಏಳನೇ ಸಮಿಸ್ಟರ್ನ ವಿದ್ಯಾರ್ಥಿನಿ. ಇಬ್ಬರು ಒಂದೇ ಕಾಲೇಜಿನ ವಿದ್ಯಾರ್ಥಿಗಳು. ಈ ಘಟನೆ ನಡೆದ ಬಳಿಕ ಅ.15ರಂದು ಸಂತ್ರಸ್ತೆ ದೂರು ದಾಖಲಿಸಿದ್ದಾಳೆ. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.
ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ಪ್ರಕಾರ, ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 64 (ಅತ್ಯಾಚಾರಕ್ಕೆ ಶಿಕ್ಷೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸಂತ್ರಸ್ತೆ ಮತ್ತು ಆರೋಪಿ ಇಬ್ಬರು ಪರಿಚಿತರು. ಇಬ್ಬರು ಕ್ಲಾಸ್ಮೇಟ್ಗಳು. ಆದರೆ, ಬ್ಯಾಕ್ಲಾಗ್ ಇದ್ದಿದ್ದರಿಂದ ಆರೋಪಿ ಜೀವನ ಗೌಡ ಒಂದು ಸೆಮಿಸ್ಟರ್ ಹಿಂದೆ ಉಳಿದಿದ್ದ. ಘಟನೆ ನಡೆದ ದಿನ, ಸಂತ್ರಸ್ತೆ ಕೆಲವು ವಸ್ತುಗಳನ್ನು ಪಡೆಯಲು ಜೀವನ್ ಗೌಡನನ್ನು ಭೇಟಿಯಾಗಿದ್ದಳು ಎಂದು ವರದಿಯಾಗಿದೆ.
ಊಟದ ವಿರಾಮದ ಸಮಯದಲ್ಲಿ, ಆರೋಪಿ ಜೀವನ್ ಗೌಡ, ಸಂತ್ರಸ್ತೆಗೆ ಹಲವು ಬಾರಿ ಕರೆ ಮಾಡಿ, ಏಳನೇ ಮಹಡಿಯಲ್ಲಿರುವ ಆರ್ಕಿಟೆಕ್ಚರ್ ಬ್ಲಾಕ್ ಬಳಿ ತನ್ನನ್ನು ಭೇಟಿಯಾಗುವಂತೆ ಕೇಳಿಕೊಂಡಿದ್ದಾನೆ. ಆಕೆ ಬಂದಾಗ, ಆಕೆಯನ್ನು ಬಲವಂತವಾಗಿ ಚುಂಬಿಸಲು ಯತ್ನಿಸಿದ್ದಾನೆ. ಅಲ್ಲದೆ, ಆಕೆ ಲಿಫ್ಟ್ ಬಳಸಿ ಅಲ್ಲಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾಗ, ಆರನೇ ಮಹಡಿಯವರೆಗೂ ಆಕೆಯನ್ನು ಹಿಂಬಾಲಿಸಿ, ಪುರುಷರ ಶೌಚಾಲಯಕ್ಕೆ ಎಳೆದುಕೊಂಡು ಹೋಗಿ, ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎನ್ನಲಾಗಿದೆ.
ದೌರ್ಜನ್ಯ ಎಸಗುವ ಸಮಯದಲ್ಲಿ ಆರೋಪಿ ಜೀವನ್ ಗೌಡ, ಬಾತ್ರೂಮ್ನ ಬಾಗಿಲನ್ನು ಲಾಕ್ ಮಾಡಿದ್ದಾನೆ. ಇದೇ ಸಮಯದಲ್ಲಿ ಆಕೆಯ ಫೋನ್ ರಿಂಗಣಿಸಿದಾಗ ಅದನ್ನು ತನ್ನ ವಶಕ್ಕೆ ಪಡೆದಿದ್ದಾನೆ. ಅ.10ರಂದು ಮಧ್ಯಾಹ್ನ 1.30 ರಿಂದ 1.50ರ ನಡುವೆ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಈ ಘಟನೆಯ ಬಳಿಕ ಸಂತ್ರಸ್ತೆ, ತನ್ನ ಇಬ್ಬರು ಸ್ನೇಹಿತರಿಗೆ ಈ ವಿಚಾರವನ್ನು ಹೇಳಿಕೊಂಡಿದ್ದಾಳೆ. ಇದಾದ ಬಳಿಕ ಆರೋಪಿ ಜೀವನ್ ಗೌಡ ಸಂತ್ರಸ್ತೆಗೆ ಕರೆ ಮಾಡಿ, ನಿನಗೆ ಮಾತ್ರೆ ಬೇಕೇ? ಎಂದು ಕೇಳಿದ್ದಾನೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.ಆರೋಪಿ ವಿರುದ್ಧ ದೂರು ನೀಡಲು ಆರಂಭದಲ್ಲಿ ಸಂತ್ರಸ್ತೆ ಹಿಂಜರಿಯುತ್ತಿದ್ದಳು. ಆನಂತರ ಆಕೆ ತನ್ನ ಪಾಲಕರಿಗೆ ಮಾಹಿತಿ ನೀಡಿದಾಗ, ಅವರು ಹನುಮಂತನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಗುರುವಾರ (ಅ.16) ಅಪರಾಧ ಸ್ಥಳದ ಪರಿಶೀಲನೆ ನಡೆಸಿದರು. ಘಟನೆ ನಡೆದ ಸ್ಥಳದಲ್ಲಿ ಯಾವುದೇ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿಲ್ಲ ಎಂಬುದನ್ನು ಅಧಿಕಾರಿಗಳು ದೃಢಪಡಿಸಿದ್ದಾರೆ. ಹೀಗಾಗಿ, ಇದು ಸಾಕ್ಷ್ಯ ಸಂಗ್ರಹಕ್ಕೆ ಹಿನ್ನಡೆಯಾಗಬಹುದು. ಆದರೆ, ವಿಧಿವಿಜ್ಞಾನ ಮತ್ತು ಡಿಜಿಟಲ್ ಪುರಾವೆಗಳನ್ನು ಪರಿಶೀಲಿಸಲಾಗುತ್ತಿದೆ.


















