ಮಂಗಳೂರು: ಕಳೆದ ವಾರ ವೇಣೂರಿನಲ್ಲಿ ನಡೆದ ಕಂಬಳದಲ್ಲಿ 8.96 ಸೆಕೆಂಡ್ ನಲ್ಲಿ 100 ಮೀ. ಓಡುವ ಮೂಲಕ ವಿಶ್ವದಾಖಲೆ ನಿರ್ಮಿಸಿದ ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡರು ಮಾ.27-28ರಂದು ಬಂಟ್ವಾಳ ತಾಲೂಕಿನ ಕಕ್ಕೆಪದವು ಉಳಿಯಲ್ಲಿ ನಡೆಯುತ್ತಿರುವ ಸತ್ಯ-ಧರ್ಮ ಜೋಡುಕರೆ ಕಂಬಳದಲ್ಲಿ ಕಳೆದ ವಾರದ ದಾಖಲೆಯನ್ನು ಮುರಿದು ಹೊಸ ದಾಖಲೆ ಬರೆದಿದ್ದಾರೆ.
ಫೈನಲ್ ನಲ್ಲಿ ಮಿಜಾರು ಪ್ರಸಾದ್ ನಿಲಯ ಶಕ್ತಿ ಪ್ರಸಾದ್ ಶೆಟ್ಟಿ ಅವರ ಕೋಣಗಳನ್ನು 8.78 ಸೆಕೆಂಡ್ ನಲ್ಲಿ 100 ಮೀ. ಓಡಿಸುವ ಮೂಲಕ ಈ ಹೊಸ ದಾಖಲೆ ಬರೆದಿದ್ದಾರೆ. ಆ ಮೂಲಕ ಕಂಬಳದಲ್ಲಿ ಅವರದ್ದೇ ಹಿಂದಿನ ದಾಖಲೆಮುರಿದು ಹೊಸ ದಾಖಲೆ ಬರೆದಿದ್ದಾರೆ.
ಶ್ರೀನಿವಾಸ ಗೌಡರಿಗೆ ಒಂದೇ ಕಂಬಳದಲ್ಲಿ ಆರು ಪದಕ: ಇಲ್ಲಿ ನಡೆಯುತ್ತಿರುವ ಕಂಬಳದಲ್ಲಿ ಹಗ್ಗ ಹಿರಿಯ ವಿಭಾಗದಲ್ಲಿ ಮಿಜಾರು ಪ್ರಸಾದ್ ನಿಲಯ ಶಕ್ತಿ ಪ್ರಸಾದ್ ಶೆಟ್ರ ಎ ಮತ್ತು ಬಿ ಕೋಣಗಳನ್ನು ಓಡಿಸಿ ಫೈನಲ್ ನಲ್ಲಿ ಪ್ರಥಮ-ದ್ವಿತೀಯ ಬಹುಮಾನ ಪಡೆದಿದ್ದಾರೆ.
ನೇಗಿಲು ಹಿರಿಯ ವಿಭಾಗದಲ್ಲಿ ಪಡ್ಡಯೂರು ಗುತ್ತು ಮಿಹಿರ್ ಸತ್ಯನಾರಾಯಣ ಶೆಟ್ಟಿ ಹಾಗೂ ಸರಪಾಡಿ ಕೆಳಗಿನಬಳ್ಳಿ ಲಿಯೋ ಫರ್ನಾಂಡೀಸ್ ಅವರ ಕೋಣಗಳನ್ನು ಓಡಿಸಿ ಪ್ರಥಮ ದ್ವಿತೀಯ ಬಹುಮಾನ ಪಡೆದರು. (ನೇಗಿಲು ಹಿರಿಯ ವಿಭಾಗದಲ್ಲಿ ಬಹುಮಾನ ಪಡೆದಿರುವುದು ಒಂದೇ ಮನೆಯ ಕೋಣಗಳು ಹೆಸರು ಮಾತ್ರ ಬೇರೆ ಇದೆ ಹೀಗಾಗಿ ಫೈನಲ್ ಸ್ಪರ್ಧೆ ಇರಲಿಲ್ಲ)
ಅದಲ್ಲದೇ ಜೂನಿಯರ್ ಹಗ್ಗದ ವಿಭಾಗದಲ್ಲಿ ಮೂಡುಬಿದಿರೆ ನ್ಯೂ ಪಡಿವಾಲ್ಸ್ ಹಾರ್ದಿಕ್ ಹರ್ಷವರ್ಧನ ಪಡಿವಾಲ್ಸ್ ಮತ್ತು ನೇಗಿಲು ಕಿರಿಯ ವಿಭಾಗದಲ್ಲಿ ಮೂಡಬಿದಿರೆ ನ್ಯೂ ಪಡಿವಾಲ್ಸ್ ಶ್ರುತಿ ಹಾರ್ದಿಕ್ ಪಡಿವಾಲ್ಸ್ ಅವರ ಕೋಣಗಳನ್ನು ಓಡಿಸಿ ಪ್ರಶಸ್ತಿ ಗಳಿಸುವ ಮೂಲಕ ಈ ಸಾಧನೆಯನ್ನು ಮಾಡಿದ್ದಾರೆ.