ಸಾಣೂರು ಹಾಲು ಉತ್ಪಾದಕರ ಸಂಘದ ವಾರ್ಷಿಕ ಸಭೆ; ಸದಸ್ಯರಿಗೆ ಶೇ.15 ಡಿವಿಡೆಂಟ್ ಘೋಷಣೆ

ಕಾರ್ಕಳ: ಸಾಣೂರು ಹಾಲು ಉತ್ಪಾದಕರ ಸಹಕಾರ ಸಂಘದ 2019-20 ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯು ಇಂದು ಸಾಣೂರು ಸುವರ್ಣ ಗ್ರಾಮೋದಯ ಸೌಧದಲ್ಲಿ ನಡೆಯಿತು.

ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದ ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟದ ನಿರ್ದೇಶಕ, ಸಂಘದ ಅಧ್ಯಕ್ಷ ಸಾಣೂರು ನರಸಿಂಹ ಕಾಮತ್ ಮಾತನಾಡಿ, ಗುಣಮಟ್ಟದ ಹಾಲು ಪೂರೈಕೆ ಮಾಡುವ ಹೈನುಗಾರ ಸದಸ್ಯರು ಸಂಘದ ಆಸ್ತಿಯಾಗಿದ್ದು, ವೈಜ್ಞಾನಿಕ ರೀತಿಯ ಹೈನುಗಾರಿಕೆಯಿಂದ ಗ್ರಾಮೀಣ ಭಾಗದ ಜನರ ಜೀವನ ಮಟ್ಟದಲ್ಲಿ ಆರ್ಥಿಕ ಸುಧಾರಣೆ ಸಾಧ್ಯ ಎಂದರು.

ಒಕ್ಕೂಟದಿಂದ ಸಿಗುವ ವಿವಿಧ ರೀತಿಯ ಪ್ರೋತ್ಸಾಹಕ ಯೋಜನೆಗಳನ್ನು ಸಮರ್ಪಕವಾಗಿ ಸದುಪಯೋಗ ಪಡಿಸಿಕೊಂಡಲ್ಲಿ ಹೈನುಗಾರಿಕೆಯಲ್ಲಿ ಉತ್ತಮ ಆದಾಯ ಗಳಿಸಬಹುದು. ಸಾಮೂಹಿಕ ಜಾನುವಾರು ವಿಮೆ ಮತ್ತು ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲ ಸೌಲಭ್ಯವನ್ನು ಎಲ್ಲಾ ಹೈನುಗಾರರು ಪಡೆದುಕೊಳ್ಳಬೇಕೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಂಘದ ನಿವ್ವಳ ಲಾಭಾಂಶದ ಹಂಚಿಕೆಯಲ್ಲಿ ಸದಸ್ಯರಿಗೆ ಶೇ. 15 ಡಿವಿಡೆಂಟ್ ಮತ್ತು ₹65 ,755 ಬೋನಸ್ ವಿತರಣೆ ಮಾಡಲಾಯಿತು.
ನಿರ್ದೇಶಕ ಮುದೆಲಾಡಿ ಪ್ರವೀಣ ಶೆಟ್ಟಿ ಸಂಘದ 2019-20 ನೇ ಸಾಲಿನ ವಾರ್ಷಿಕ ವರದಿ ಮಂಡಿಸಿದರು.

ಸಂಘದ ಕಾರ್ಯದರ್ಶಿ ಜ್ಞಾನದೇವ ಅವರು ಲೆಕ್ಕಪರಿಶೋಧನಾ ವರದಿ, ಅನುಪಾಲನ ವರದಿ, ಅಂದಾಜು ಆಯ- ವ್ಯಯ, 2020-21 ನೇ ಸಾಲಿನ ಸಂಘದ ಕಾರ್ಯಚಟುವಟಿಕೆಗಳ ವಿವರಗಳನ್ನು ಅನುಮೋದನೆಗಾಗಿ ಸಭೆಗೆ ಮಂಡಿಸಿದರು.
ಒಕ್ಕೂಟದ ಪಶುವೈದ್ಯ ಡಾ. ಶೀತಲ್ ಕುಮಾರ್ ರಾಸುಗಳ ನಿರ್ವಹಣೆ, ಲವಣ ಮಿಶ್ರಣದ ಮಹತ್ವ, ಗುಣಮಟ್ಟದ ಹಾಲು ಉತ್ಪಾದನೆಯ ಬಗ್ಗೆ ಮಾಹಿತಿ ನೀಡಿದರು.

ವಿಸ್ತರಣಾಧಿಕಾರಿ ಶಮೀರ್ ಹೈನುಗಾರಿಕೆ ಅಭಿವೃದ್ಧಿಗಾಗಿ ಹಸಿರು ಮೇವು ಪ್ರೋತ್ಸಾಹಕ ಯೋಜನೆ, ಜಾನುವಾರು ವಿಮೆ, ಇನ್ನಿತರ ಒಕ್ಕೂಟದ ಯೋಜನೆಗಳ ಮಾಹಿತಿಯನ್ನು ನೀಡಿದರು.
ಕಳೆದ ಸಾಲಿನ ಎಸ್ಸೆಸ್ಸೆಲ್ಸಿ, ಪಿಯುಸಿ ಮತ್ತು ಪದವಿ ಶಿಕ್ಷಣದಲ್ಲಿ ಅತ್ಯಧಿಕ ಹೆಚ್ಚು ಅಂಕಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ನಗದು ಬಹುಮಾನ ಪುರಸ್ಕಾರ ನೀಡಿ ಗೌರವಿಸಲಾಯಿತು.

ರಾಜ್ಯ ಮಟ್ಟದ “ಅತ್ಯುತ್ತಮ ಯುವಕ ಮಂಡಲ” ಪ್ರಶಸ್ತಿ ವಿಜೇತ ಸಾಣೂರು ಯುವಕ ಮಂಡಲದ ಅಧ್ಯಕ್ಷರು ಪದಾಧಿಕಾರಿಗಳು ಮತ್ತು ಸದಸ್ಯರನ್ನು ಈ ಸಂದರ್ಭದಲ್ಲಿ ಅಭಿನಂದನಾ ಪತ್ರ ನೀಡಿ ಸನ್ಮಾನಿಸಲಾಯಿತು.

ಸಂಘಕ್ಕೆ ಅತ್ಯಧಿಕ ಹಾಲು ಪೂರೈಕೆ ಮಾಡಿದ ಹತ್ತು ಜನ ಸದಸ್ಯರಿಗೆ ಮತ್ತು ಗುಣಮಟ್ಟದ ಹಾಲು ಪೂರೈಸಿದ ಸಂಘದ ಮೂರು ಜನ ಸದಸ್ಯರಿಗೆ ವಿಶೇಷ ಬಹುಮಾನ ನೀಡಿ ಪುರಸ್ಕರಿಸಲಾಯಿತು.
ಸಂಘದ ನಿರ್ದೇಶಕರಾದ ಕೊರಗ ಶೆಟ್ಟಿ , ಶ್ರೀಧರ ಸಮಗಾರ, ಉಮಾನಾಥ ಶೆಟ್ಟಿ, ವಿಶ್ವನಾಥ್ ಶೆಟ್ಟಿಗಾರ್, ಸುಗಂಧಿ ನಾಯಕ, ಸಂಜೀವಿ, ರಾಯಲ್ ನೂರೋನ್ನ, ಹಾಲು ಪರೀಕ್ಷಕ ಗುರುಪ್ರಸಾದ್, ಸ್ವಚ್ಛತಾ ಸಿಬ್ಬಂದಿ ಜಯಂತಿ ಉಪಸ್ಥಿತರಿದ್ದರು.

ಉಪಾಧ್ಯಕ್ಷೆ ಯಶೋಧ ಆರ್. ಸುವರ್ಣ ಸ್ವಾಗತಿಸಿದರು. ನಿರ್ದೇಶಕ ಜಯ ಶೆಟ್ಟಿಗಾರ್ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕ ಸೋಮಶೇಖರ್ ವಂದಿಸಿದರು.