ಉಡುಪಿ ಶ್ರೀಕೃಷ್ಣಮಠದಲ್ಲಿ ಕನ್ನಡ ನಾಮಫಲಕ ಅಳವಡಿಕೆ: ವಿವಾದಕ್ಕೆ ತೆರೆ ಎಳೆದ ಪರ್ಯಾಯ ಅದಮಾರು ಮಠ

ಉಡುಪಿ: ಕಳೆದ ಎರಡು ದಿನಗಳಿಂದ ಭಾರಿ ವಿವಾದಕ್ಕೆ ಗುರಿಯಾಗಿದ್ದ ಕೃಷ್ಣಮಠದ ಪ್ರವೇಶ ದ್ವಾರದಲ್ಲಿನ ಕನ್ನಡ ನಾಮಫಲಕ ತೆಗೆದುಹಾಕಿರುವ ವಿಚಾರವೂ ಕೊನೆಗೂ ಬಗೆಹರಿದಿದೆ.

ಪರ್ಯಾಯ ಅದಮಾರು ಮಠದ ಆಡಳಿತ ಮಂಡಳಿ ಶ್ರೀಕೃಷ್ಣಮಠದ ಮುಖ್ಯ ಪ್ರವೇಶ ದ್ವಾರದಲ್ಲಿ ಕನ್ನಡ ನಾಮಫಲಕ ಅಳವಡಿಸುವ ಮೂಲಕ‌ ವಿವಾದಕ್ಕೆ ತೆರೆ ಎಳೆದಿದೆ.

ಮಠವನ್ನು ಸುಣ್ಣಬಣ್ಣ ಬಳಿದು ನವೀಕರಣಗೊಳಿಸುವ ವೇಳೆ ಕನ್ನಡ ನಾಮಫಲಕವನ್ನು ತೆರವು ಮಾಡಲಾಗಿತ್ತು. ಬಳಿಕ ತುಳು ಹಾಗೂ ಸಂಸ್ಕೃತ ಭಾಷೆಯ ನಾಮಫಲಕವನ್ನು ಮಾತ್ರ ಅಳವಡಿಸಲಾಗಿತ್ತು. ಇದು ಭಾರಿ ಜನಾಕ್ರೋಶಕ್ಕೆ ಕಾರಣವಾಗಿತ್ತು. ಅಲ್ಲದೆ, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕೂಡ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿತ್ತು.

ಕನ್ನಡ ನಾಮಫಲಕ ವಿಚಾರ ವಿವಾದಕ್ಕೆ ಗುರಿಯಾಗುತ್ತಿದ್ದಂತೆ ಎಚ್ಚತ್ತ ಅದಮಾರು ಮಠದ ಈ ಬಗ್ಗೆ ಸ್ಪಷ್ಟೀಕರಣ ನೀಡಿತ್ತು. ಪ್ಲಾಸ್ಟಿಕ್‌ ನಾಮಫಲಕದ ಬದಲು ಮರದ ನಾಮಫಲಕವನ್ನು ಅಳವಡಿಸುವ ಪ್ರಕ್ರಿಯೆ ನಡೆಯುತ್ತಿದೆ. ತುಳು ಮತ್ತು ಸಂಸ್ಕೃತ ನಾಮಫಲಕಗಳು ಮೊದಲು ತಯಾರಾಗಿ ಬಂದ ಕಾರಣ ಅವುಗಳನ್ನು ಅಳವಡಿಸಿದ್ದೇವೆ. ಕನ್ನಡ ನಾಮಫಲಕ ಬಂದ ಕೂಡಲೇ ಅಳವಡಿಸುತ್ತೇವೆ ಎಂದು ಎಂದು ಮಠವು ಸ್ಪಷ್ಟನೆ ನೀಡಿತ್ತು. ಅದರಂತೆ ಇಂದು ಕನ್ನಡ ನಾಮಫಲಕವನ್ನು ಅಳವಡಿಸಿದೆ. ಆ ಮೂಲಕ ನಾಮಫಲಕ ವಿವಾದವೂ ಸುಖಾಂತ್ಯ ಕಂಡಿದೆ.