ಉಡುಪಿ: ಹಿಜಾಬ್ ಧರಿಸಿ ಬರುತ್ತಿದ್ದ ವಿದ್ಯಾರ್ಥಿನಿಯರನ್ನು ಪ್ರಾಂಶುಪಾಲರು ತರಗತಿಯಿಂದ ಹೊರಹಾಕಿದ ಘಟನೆ ಉಡುಪಿ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ಬೆಳಕಿಗೆ ಬಂದಿದೆ.
ಕಳೆದ ಮೂರು ದಿನಗಳಿಂದ ಆರು ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಕೊಂಡು ಬರುತ್ತಿದ್ದು, ಅವರಿಗೆ ಪ್ರಾಂಶುಪಾಲರು ತರಗತಿ ಪ್ರವೇಶಕ್ಕೆ ನಿರಾಕರಿಸುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ ಮೂರು ದಿನಗಳಿಂದ ವಿದ್ಯಾರ್ಥಿನಿಯರು ಕಾಲೇಜಿನ ಹೊರಗಡೆ ನಿಲ್ಲುತ್ತಿದ್ದಾರೆ ಎಂದು ತಿಳಿದುಬಂದಿದೆ.
ಹಿಂದು ಧರ್ಮದಲ್ಲಿ ಕುಂಕುಮ ಇಡುವಂತೆ ಮುಸ್ಲಿಂ ಧರ್ಮದಲ್ಲಿ ಹಿಜಾಬ್ ಹಾಕುತ್ತೇವೆ. ಆದರೆ ಇದಕ್ಕೆ ಇಲ್ಲಿ ವಿರೋಧ ಮಾಡಲಾಗುತ್ತಿದೆ. ಸರಕಾರಿ ಕಾಲೇಜಿನಲ್ಲಿಯೇ ತಾರತಮ್ಯ ಮಾಡುತ್ತಿದ್ದಾರೆ. ಇದ್ಯಾವ ನ್ಯಾಯ ಎಂದು ವಿದ್ಯಾರ್ಥಿಗಳು ಪ್ರಶ್ನಿಸಿದ್ದಾರೆ.
ಹಿಜಾಬ್ ಧರಿಸುವುದು ನಮ್ಮ ಸಂಸ್ಕೃತಿ. ನಮಗೆ ಹಿಜಾಬ್ ಧರಿಸಲು ಅನುಮತಿ ನೀಡಿ, ನಮಗೆ ನಮ್ಮ ಹಕ್ಕು ನೀಡಿ ಎಂದು ಕೇಳಿಕೊಂಡಿದ್ದಾರೆ.
ನಾವು ಹಿಜಾಬ್ ಹಾಕಿಕೊಂಡು ಬರುತ್ತೇವೆ ಎಂಬ ಕಾರಣಕ್ಕೆ ತರಗತಿಗೆ ಸೇರಿಸಿಕೊಳ್ಳುತ್ತಿಲ್ಲ. ತುಂಬಾ ತಾರತಮ್ಯ ಮಾಡುತ್ತಿದ್ದಾರೆ. ತರಗತಿ ಪ್ರವೇಶಕ್ಕೆ ನಿರಾಕರಿಸಲಾಗುತ್ತಿದೆ. ಹಾಜರಾತಿಯನ್ನು ನೀಡುತ್ತಿಲ್ಲ ಎಂದು ವಿದ್ಯಾರ್ಥಿನಿಯರು ಅಳಲು ತೋಡಿಕೊಂಡರು.
ಕಳೆದ ವರ್ಷ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಹಾಕುತ್ತಿದ್ದರು. ಆದರೆ ನಮಗೆ ಹಿಜಾಬ್ ಹಾಕಲು ಅವಕಾಶ ನೀಡುತ್ತಿಲ್ಲ. ನಾವು ಮೂರು ದಿನಗಳಿಂದ ತರಗತಿಯ ಹೊರಗೆ ಕುಳಿತುಕೊಳ್ಳುತ್ತಿದ್ದೇವೆ. ಹೊರಗಡೆಯೇ ಕುಳಿತುಕೊಂಡು ಊಟ ಮಾಡುತ್ತಿದ್ದೇವೆ. ಪೋಷಕರನ್ನು ಕರೆದುಕೊಂಡು ಬರಲು ಹೇಳಿದ್ದಾರೆ. ಪೋಷಕರು ಮೂರು ದಿನಗಳಿಂದ ಬರುತ್ತಿದ್ದಾರೆ. ಆದರೆ ಪ್ರಾಂಶುಪಾಲರು ಅವರ ಬಳಿ ಮಾತನಾಡಲು ತಯಾರಿಲ್ಲ. ಕೆಲಸದ ನೆಪವೊಡ್ಡಿ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಗಂಟೆ ಗಟ್ಟಲೇ ಕಾಯಿಸಿ ವಾಪಸ್ಸು ಕಳುಹಿಸುತ್ತಿದ್ದಾರೆ ಎಂದು ದೂರಿದರು.
ವಿದ್ಯಾರ್ಥಿನಿಯರ ಆರೋಪಕ್ಕೆ ಸ್ಪಷ್ಟನೆ ನೀಡಿರುವ ಕಾಲೇಜಿನ ಪ್ರಾಂಶುಪಾಲ ರುದ್ರೆಗೌಡ,
ನಮ್ಮಲ್ಲಿ ಈವರೆಗೆ ಹಿಜಾಬ್ ಹಾಕಿಕೊಂಡು ತರಗತಿಗೆ ಹಾಜರಾಗುವ ನಿಯಮ ಇರಲಿಲ್ಲ. ಕಳೆದ ಮೂರು ದಿನಗಳಿಂದ ಸುಮಾರು 60 ಮುಸ್ಲಿಮ್ ವಿದ್ಯಾರ್ಥಿನಿಯರಲ್ಲಿ ಕೆಲವು ಮಂದಿ ಮಾತ್ರ ಹಿಜಾಬ್ ಹಾಕಿಕೊಂಡು ಬರುತ್ತಿದ್ದಾರೆ. ಇವರ ಮನೆಯವರನ್ನು ಕರೆದು ಮಾತುಕತೆ ಮಾಡಿದ್ದೇವೆ. ಅವರೆಲ್ಲ ಅರ್ಥ ಮಾಡಿಕೊಂಡು ಒಪ್ಪಿದ್ದಾರೆ ಎಂದು ತಿಳಿಸಿದರು.