ಉಡುಪಿ: ಕಳ್ಳತನ ಪ್ರಕರಣ ಭೇದಿಸಿದ ಉಡುಪಿ ಪೊಲೀಸರು; ಓರ್ವನ ಬಂಧನ

ಉಡುಪಿ: ನ.17 ರಂದು ಬಾಬು ಆಚಾರ್ಯ ಅವರ ಮನೆಯಲ್ಲಿ ನಡೆದ ಕಳ್ಳತನ ಪ್ರಕರಣ ಭೇದಿಸುವಲ್ಲಿ ಉಡುಪಿ ಪೊಲೀಸರು‌ ಯಶಸ್ವಿಯಾಗಿದ್ದಾರೆ.

ನ.17 ರಂದು ಬಾಬು ಆಚಾರ್ಯರ ಮನೆಯ ಬಾಗಿಲಿನ ಬೀಗ ಮುರಿದು ಒಳಪ್ರವೇಶಿಸಿದ ಕಳ್ಳರು ಕಪಾಟಿನಲ್ಲಿದ್ದ ಒಟ್ಟು 90 ಗ್ರಾಂ ತೂಕದ ರೂ. 3,60,000/- ಮೌಲ್ಯದ ಚಿನ್ನಾಭರಣಗಳು ಹಾಗೂ ಬೆಳ್ಳಿ ಸಾಮಾಗ್ರಿಗಳು ಒಟ್ಟು ರೂ. 10,000/- ಮೌಲ್ಯದ ಹಾಗೂ ದೇವರ ಡಬ್ಬದಲ್ಲಿದ್ದ ಅಂದಾಜು ರೂ. 400/- ಒಟ್ಟು ರೂ. 3,70,400 ಮೌಲ್ಯದ ಸೊತ್ತುಗಳನ್ನು ಕಳವು ಮಾಡಿದ್ದರು. ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆಗಿಳಿದ ಪೊಲೀಸರು ಬೆರಳುಮುದ್ರೆ ಪರಿಶೀಲಿಸಿದ್ದಾರೆ. ಆಗ ಉಡುಪಿ ನಗರ ಠಾಣಾ ವ್ಯಾಪ್ತಿಯ ಸುಕೇಶ್ ನಾಯ್ಕ್ ಎಂಬಾತನ ಬೆರಳು ಅಚ್ಚು ಹೊಂದಾಣಿಕೆಯಾಗಿದೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿ ಸುಕೇಶ್ ನಾಯ್ಕ್ ನನ್ನು ನ.21ರಂದು ಬೆಳ್ಳಂಪಳ್ಳಿ ಕ್ವಾಲಿಟಿ ವೈನ್ ಶಾಪ್ ಬಳಿ ಬಂಧಿಸಿ ವಿಚಾರಣೆ ನಡೆಸಿದಾಗ ಆರೋಪಿ ಕಳವು ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. ಬಳಿಕ ಆರೋಪಿ ಕದ್ದಿರುವ ಸೊತ್ತುಗಳನ್ನು ಗುಂಡಿಬೈಲು ಪಂಚಧೂಮಾವತಿ ದೈವಸ್ಥಾನದ ಬಳಿ ಶ್ರೀಕರ ಕಾಮತ್ ಎಂಬವರ ಪೊದರು ಜಾಗದಲ್ಲಿ ಮಣ್ಣಿನ ಅಡಿಯಲ್ಲಿ ಹೂತಿಟ್ಟಿರುವ ವಿಷಯ ತಿಳಿಸಿದ್ದಾನೆ. ಅದರಂತೆ ಅಲ್ಲಿಗೆ ತೆರಳಿ ಪೊಲೀಸರು ಅಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಯ ವಿರುದ್ಧ ಹಿರಿಯಡಕ, ಮಣಿಪಾಲ, ಉಡುಪಿ ನಗರ ಠಾಣೆ, ಬ್ರಹ್ಮಾವರ ಠಾಣೆಯಲ್ಲಿ ದಾಖಲಾಗಿದ್ದು, ಜೈಲಿನಿಂದ ಒಂದು ತಿಂಗಳ ಹಿಂದೆಯಷ್ಟೇ ಬಿಡುಗಡೆಯಾಗಿದ್ದ ಎನ್ನಲಾಗಿದೆ. ಎಸ್ಪಿ ಎನ್‌. ವಿಷ್ಣುವರ್ಧನ್‌, ಎಎಸ್ಪಿ ಕುಮಾರಚಂದ್ರ ಹಾಗೂ ಉಡುಪಿ ಡಿವೈಎಸ್ಪಿ ಸುಧಾಕರ ಸದಾನಂದ ನಾಯ್ಕ್ ಅವರ ಮಾರ್ಗದರ್ಶನದಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಪ್ರಮೋದ ಕುಮಾರ್ ಪಿ, ಪ್ರೋಬೆಷನರಿ ಪಿಎಸ್‌ಐ ರವರಾದ ಸುಹಾಸ್‌. ಆರ್‌, ಪ್ರಸಾದ್‌ ಕುಮಾರ್‌, , ಸಿಬ್ಬಂದಿಯವರಾದ, ರಾಜೇಶ್ ,ಸತೀಶ , ಜೀವನ್ ಕುಮಾರ್ , ಲೋಕೇಶ್, ಸಂತೋಷ ರಾಥೋಡ , ಕಾರ್ತಿಕ್ , ಬಾಲಕೃಷ್ಣ, ಶಿವಕುಮಾರ್ , ಚೇತನ್‌, ಹೇಮಂತ್‌ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಆರೋಪಿ ಸುಕೇಶ್ ನಾಯ್ಕ್ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಕೋರ್ಟ್ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.