ಉಡುಪಿ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ: ನಾಳೆ (ನ.21) ನೂತನ ಚಿಕಿತ್ಸಾ ವಿಭಾಗಗಳ ಉದ್ಘಾಟನೆ

ಉಡುಪಿ: ಕರಾವಳಿ ಪ್ರಸಿದ್ದ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಉಡುಪಿ ಇದರ ಕಣ್ಣಿನ ನೂತನ ಚಿಕಿತ್ಸಾ ಸೌಲಭ್ಯಗಳ ವಿಭಾಗಗಳಾದ ಅರ್ಥೋಪ್ಟಿಕ್ ಕಣ್ಣಿನ ವಿಭಾಗ, ನಿಮ್ನ ದೃಷ್ಟಿ ನೆರವು ಕ್ಲಿನಿಕ್ (ಲೋ ವಿಷನ್ ಏಡ್ಸ್‌) ವಿಭಾಗ, ಮಕ್ಕಳ ನೇತ್ರ ಚಿಕಿತ್ಸಾ, ಐಟ್ರೇಸ್ ವಿಭಾಗದ ಉದ್ಘಾಟನಾ ಸಮಾರಂಭ ನಾಳೆ (ನ.21) ಆಸ್ಪತ್ರೆಯ ಸಭಾಭವನದಲ್ಲಿ ನಡೆಯಲಿದೆ.

ಈ ಬಗ್ಗೆ ಮಾಹಿತಿ ನೀಡಿದ ಪ್ರಸಾದ್ ನೇತ್ರಾಲಯದ ವೈದ್ಯಕೀಯ ನಿರ್ದೇಶಕ ನಾಡೋಜ ಡಾ. ಕೃಷ್ಣಪ್ರಸಾದ್ ಕೂಡ್ಲುರವರು, ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನ ಶ್ರೀಪಾದರು ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡುವರು. ವಿದ್ವಾನ್ ಕಬಿಯಾಡಿ ಜಯರಾಮ ಆಚಾರ್ಯರು ಶುಭ ಸಂದೇಶ ನೀಡುವರು.

ಗುಜರಾತ್ ರಾಜ್ಯದ ವಾಡ್‌ನಗರದ ಸರ್ವೋದಯ ಸೇವಾ ಟ್ರಸ್ಟ್ ಇದರ ಮುಖ್ಯ ಅಧ್ಯಕ್ಷರಾದ ಸೋಮ್ ಭೈಮೋದಿ ಅರ್ಥಾಪ್ಟಿಕ್ ಕ್ಲಿನಿಕ್, ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್‌ ಲೋ ವಿಷನ್ ಕ್ಲಿನಿಕ್ ಮತ್ತು ಮಾಹೆಯ ಪ್ರೊ. ಛಾನ್ಸೆಲ್ಲರ್ ಡಾ. ಎಚ್.ಎಸ್. ಬಲ್ಲಾಳ್ ಮಕ್ಕಳ ಕಣ್ಣಿನ ಕ್ಲಿನಿಕ್ ಅನ್ನು ಹಾಗೂ ವಿವೇಕಾನಂದ ವಿದ್ಯಾವರ್ಧಕ ಸಂಘ, ಪುತ್ತೂರು ಇದರ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್ ಅವರು ಐ ಟ್ರೇಸ್ ವಿಭಾಗವನ್ನು ಉದ್ಘಾಟಿಸಲಿದ್ದಾರೆ.

ಉಡುಪಿಯ ಶಾಸಕ ಕೆ. ರಘುಪತಿ ಭಟ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ  ಶ್ಯಾಮಲಾ ಕುಂದರ್‌, ಮುಂಬೈ ಬಿಜೆಪಿ ಕಾರ್ಯದರ್ಶಿ ಮೋಹನ ಗೌಡ ಹಾಗೂ ಉಡುಪಿಯ ಖ್ಯಾತ ಉದ್ಯಮಿ ಪುರುಷೋತ್ತಮ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಶಸ್ತ್ರಚಿಕಿತ್ಸೆ ಮಾಡದೆ ದೃಷ್ಟಿದೋಷ ನಿವಾರಣೆ:
ಆರ್ಥೋಪ್ಟಿಕ್ ಕಣ್ಣಿನ ವಿಭಾಗವು ಕಣ್ಣಿನ ದೌರ್ಬಲ್ಯದಿಂದಾಗುವ ದೃಷ್ಟಿದೋಷ, ಮಕ್ಕಳ ಮೆಳ್ಳೆಗಣ್ಣು, ಕಣ್ಣಿನ ಮಾಂಸಖಂಡ ದೌರ್ಬಲ್ಯತೆ, ಕಣ್ಣಿನ ಚಲನೆಯಲ್ಲಿನ ವ್ಯತ್ಯಯ ಮುಂತಾದ ದೋಷಗಳನ್ನು ಯಾವುದೇ ಶಸ್ತ್ರಚಿಕಿತ್ಸೆಗಳ ಪ್ರಯೋಗವಿಲ್ಲದೇ, ತಜ್ಞರು ಕೇವಲ ಕಣ್ಣಿನ ವಿವಿಧ ವ್ಯಾಯಾಮಗಳ ಮೂಲಕ ಸರಿಪಡಿಸುವ ವಿಭಾಗವಾಗಿದೆ. ಇದು ಕರಾವಳಿ ಕರ್ನಾಟಕದಲ್ಲಿರುವ ಏಕೈಕ ನೇತ್ರೋಪಕರಣವಾಗಿದೆ.
ನಿಮ್ನ ದೃಷ್ಟಿ ನೆರವು ಕ್ಲಿನಿಕ್ (ಲೋ ವಿಷನ್ ಏಡ್ಸ್‌) ವಿಭಾಗವು ಕನ್ನಡಕದ ಬಳಕೆಯಿಂದ, ಕಾಂಟಾಕ್ಟ್ ಲೆನ್ಸ್ ಬಳಕೆಯಿಂದ, ಔಷಧಗಳಿಂದ ಅಥವಾ ಶಸ್ತ್ರಚಿಕಿತ್ಸೆ ಮುಖೇನ ಸಂಪೂರ್ಣವಾಗಿ ಸರಿಪಡಿಸಲಾಗದಂತಹ ದೃಷ್ಟಿ ದೋಷವಿದ್ದು, ಉಳಿದಿರುವಂತಹ ದೃಷ್ಟಿಯನ್ನು ವಿವಿಧ ಉಪಕರಣಗಳ ಬಳಕೆಯ ಮುಖಾಂತರ ಉಪಯೋಗಿಸಿಕೊಂಡು ದೈನಂದಿನ ಚಟುವಟಿಕೆಗಳನ್ನು ನಡೆಸುವರೇ ನೇತ್ರ ತಜ್ಞರು ಸಹಾಯ ಮಾಡುವ ವಿಭಾಗವಾಗಿದೆ.

ಮಕ್ಕಳ ನೇತ್ರ ಚಿಕಿತ್ಸಾ ವಿಭಾಗವು ಮಕ್ಕಳ ವಿವಿಧ ರೀತಿಯ ಕಣ್ಣಿನ ತೊಂದರೆಗಳು, ಮಳೆಗಣ್ಣು, ಜನ್ಮತಃ ಬಂದಿರುವ ದೃಷ್ಟಿದೋಷಗಳಿಗೆ ಚಿಕಿತ್ಸೆ ನೀಡುವ ವಿಭಾಗವಾಗಿದ್ದು, ಮಕ್ಕಳ ನೇತ್ರ ತಜ್ಞರು ಚಿಕಿತ್ಸೆ ನೀಡಲಿದ್ದಾರೆ. ಐ ಟ್ರೇಸ್ – ಬೇರೆ ಬೇರೆ ಉಪಕಣಗಳಿಂದ ಮಾಡಬೇಕಾಗಿರುವ ಪರೀಕ್ಷೆಗಳನ್ನು ಒಂದೇ ಉಪಕರಣದಲ್ಲಿ ಕಣ್ಣಿನ ಸಂಪೂರ್ಣ ಚಿತ್ರಣ ನೀಡುವ, ಕಣ್ಣಿನ ಪ್ರಕೃತಿಯ ಬಗ್ಗೆ ಸಂಪೂರ್ಣ ಅತೀ ನಿಖರವಾದ ವಿವರ ನೀಡುವ ವಿಶಿಷ್ಟ ಯಂತ್ರವಾಗಿದ್ದು, ರೋಗಿಗೆ ಶಸ್ತ್ರಚಿಕಿತ್ಸೋತ್ತರ ಫಲಿತಾಂಶವು ಅತೀ ಉತ್ತಮವಾಗಿರುತ್ತದೆ ಎಂದು ಸಂಸ್ಥೆ ತಿಳಿಸಿದೆ.