ವಿಧಾನ ಪರಿಷತ್ ಚುನಾವಣೆ; ಪಕ್ಷೇತರ ಅಭ್ಯರ್ಥಿಯೊಂದಿಗೆ ಹೊಂದಾಣಿಕೆ ಇಲ್ಲ; ಕುಯಿಲಾಡಿ

ಉಡುಪಿ: ವಿಧಾನ ಪರಿಷತ್ ಚುನಾವಣೆಯ ದಕ್ಷಿಣ ಕನ್ನಡ ಮತ್ತು ಉಡುಪಿ ದ್ವಿಸದಸ್ಯ ಕ್ಷೇತ್ರದಲ್ಲಿ ಬಿಜೆಪಿ ಯಾರೊಂದಿಗೂ ಕೂಡ ಹೊಂದಾಣಿಕೆ ಮಾಡುವುದಿಲ್ಲ ಎಂದು ಬಿಜೆಪಿ ಉಡುಪಿ ಜಿಲ್ಲಾ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.

ಹಾಲಿ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರು ಸ್ಪರ್ಧಿಸುವುದು ಬಹುತೇಕ ಖಚಿತ. ಈ ಬಗ್ಗೆ ಎರಡು ದಿನಗಳಲ್ಲಿ ನಿರ್ಧಾರ ಮಾಡಲಾಗುವುದು. ಬಿಜೆಪಿಗೆ ಓರ್ವ ಅಭ್ಯರ್ಥಿಯ ಗೆಲುವಿಬೇಕಾದ ಮತಗಳಿವೆ. ಆದರೆ ಇನ್ನೊಂದು ಅಭ್ಯರ್ಥಿ ಹಾಕುವ ಬಗ್ಗೆ ಚರ್ಚೆ ನಡೆದಿಲ್ಲ ಎಂದರು.

ದ.ಕ., ಉಡುಪಿಯಲ್ಲಿ 6,045 ಮತಗಳಿವೆ:
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 3,529 ಹಾಗೂ ಉಡುಪಿ ಜಿಲ್ಲೆಯಲ್ಲಿ 2,516 ಮತಗಳು (ಸ್ಥಳೀಯಾಡಳಿತ ಸಂಸ್ಥೆಗಳ ಪ್ರತಿನಿಧಿಗಳು) ಸೇರಿದಂತೆ ಒಟ್ಟು 6,045 ಮತಗಳಿವೆ. ಆ ಪೈಕಿ ದಕ್ಷಿಣ ಕನ್ನಡದಲ್ಲಿ ಬಿಜೆಪಿಗೆ 2,136 ಮತ್ತು ಉಡುಪಿಯಲ್ಲಿ 1,572 ಸಹಿತ ಒಟ್ಟು 3,708 ಮತಗಳಿವೆ. ಕಾಂಗ್ರೆಸ್ ಗೆ ದ.ಕ.ದಲ್ಲಿ 1,141 ಹಾಗೂ ಉಡುಪಿಯಲ್ಲಿ 781 ಸಹಿತ ಒಟ್ಟು 1922 ಮತಗಳಿವೆ. ಜೆಡಿಎಸ್ ಗೆ 6 ಹಾಗೂ 219 ಪಕ್ಷೇತರ ಮತಗಳಿವೆ. ಬಿಜೆಪಿಯ ಮತಗಳು ಯಾರಿಗೂ ಹಂಚಿ ಹೋಗದಂತೆ ನೋಡಿಕೊಳ್ಳುತ್ತೇವೆ. ಎಲ್ಲ ಮತಗಳು ನಮ್ಮ ಅಭ್ಯರ್ಥಿಗೆ ಚಲಾವಣೆ ಆಗುವಂತೆ ಮಾಡುತ್ತೇವೆ ಎಂದು ಕುಯಿಲಾಡಿ ಹೇಳಿದರು.