ಕ್ರೂರ ವಿಧಿಯು ಪುನೀತ್ ಅವರನ್ನು ನಮ್ಮಿಂದ ಕಿತ್ತುಕೊಂಡಿದೆ: ಪ್ರಧಾನಿ ಮೋದಿ ಸಂತಾಪ

ಬೆಂಗಳೂರು: ನಟ ಪುನೀತ್ ರಾಜ್‌ಕುಮಾರ್ ನಿಧನಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಂಬನಿ ಮಿಡಿದಿದ್ದಾರೆ.

ಕ್ರೂರ ವಿಧಿಯು ಪುನೀತ್ ರಾಜ್‌ಕುಮಾರ್ ಎಂಬ ಪ್ರತಿಭಾವಂತ ನಟನನ್ನು ನಮ್ಮಿಂದ ಕಿತ್ತುಕೊಂಡಿದೆ. ಇದು ಸಾಯುವ ವಯಸ್ಸಾಗಿರಲಿಲ್ಲ. ಮುಂಬರುವ ಪೀಳಿಗೆಗಳು ಅವರ ಚಿತ್ರಗಳು ಮತ್ತು ಅದ್ಭುತ ವ್ಯಕ್ತಿತ್ವಕ್ಕಾಗಿ ಅವರನ್ನು ಪ್ರೀತಿಯಿಂದ ನೆನಪಿಸಿಕೊಳ್ಳುತ್ತವೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಸಂತಾಪಗಳು. ಓಂ ಶಾಂತಿ ಎಂದು ಟ್ವೀಟ್ ಮಾಡಿದ್ದಾರೆ.

ಪುನೀತ್ ನಿಧನಕ್ಕೆ ಪೇಜಾವರ ಶ್ರೀ ಸಂತಾಪ:
ಅಭಿನಯದಲ್ಲಿ ಅಪೂರ್ವ ಯಶಸ್ಸು ಸಂಪಾದಿಸುವುದರ ಜೊತೆಗೆ ಹತ್ತಾರು ಸೇವಾ ಕಾರ್ಯಗಳ ಮಾದರಿಯಾಗಿ ಮಾನವೀಯ ಕರ್ತವ್ಯಗಳನ್ನು‌ ನಿರ್ವಹಿಸುತ್ತಿದ್ದ ಪುನೀತ್ ರಾಜ್ ಅವರ ಹಠಾತ್ ನಿಧನದ ಸುದ್ದಿ ತಿಳಿದು ತೀವ್ರ ಖೇದವಾಗಿದೆ. ಅವರ ಆತ್ಮಕ್ಕೆ ಭಗವಂತನು ಸದ್ಗತಿಯನ್ನು ಮತ್ತು ಅವರ ಕುಟುಂಬಕ್ಕೆ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.

ರಾಹುಲ್‌ ಗಾಂಧಿ ಸಂತಾಪ:
ನಟ ಪುನೀತ್ ರಾಜ್‌ಕುಮಾರ್ ನಿಧನಕ್ಕೆ ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಅವರು ಸಂತಾಪ ಸೂಚಿಸಿದ್ದಾರೆ.

ಕನ್ನಡ ಚಿತ್ರರಂಗದ ಖ್ಯಾತ ನಟ ಪುನೀತ್ ರಾಜ್‌ಕುಮಾರ್ ಅವರ ನಿಧನಕ್ಕೆ ಸಂತಾಪ ಸೂಚಿಸುತ್ತೇನೆ.  ಪುನೀತ್‌ ಅವರು ಇನ್ನಿಲ್ಲ ಎನ್ನುವ ಸ್ಥಿತಿಯನ್ನು ಭರಿಸುವ ಶಕ್ತಿಯನ್ನು ಆ ಭಗವಂತ ಅವರ ಕುಟುಂಬಕ್ಕೆ ಹಾಗೂ ಅಭಿಮಾನಿಗಳಿಗೆ ನೀಡಲಿ ಎಂದು ಪ್ರಾರ್ಥನೆ ಮಾಡುತ್ತೇನೆ’ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.

ಪುನೀತ್ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಿದ್ದರಾಮಯ್ಯ, ಎಚ್‌.ಡಿ.ಕುಮಾರಸ್ವಾಮಿ, ಎಚ್.ಡಿ. ದೇವೇಗೌಡರು, ಡಿಕೆ ಶಿವಕುಮಾರ್, ಯಡಿಯೂರಪ್ಪನವರು ಸೇರಿದಂತೆ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ.