ಕಾರ್ಕಳ: ಮೂವರು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿ, ಮಾರಕಾಸ್ತ್ರದಿಂದ ಮಾರಣಾಂತಿಕ ಹಲ್ಲೆ ಮಾಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಕಾರ್ಕಳ ಪೋಲೀಸರು ಗುರುವಾರ ರಾತ್ರಿ ಬಂಧಿಸಿದ್ದಾರೆ.
ಕುಕ್ಕುಂದೂರು ಪಿಲಿಚಾಮುಂಡಿ ದೈವಸ್ಥಾನದ ಎದುರಿನ ಬೋವಿ ಸಮುದಾಯ ಮತ್ತು ಪರಿಶಿಷ್ಟ ಪಂಗಡದವರ ಕಾಲನಿಯ ಹುಸೇನ್ (50) ಎಂಬಾತ ಬಂಧಿತ ಆರೋಪಿ. ಈತ ಬೆತ್ತಲೆಯಾಗಿ ಹಿಂದೂ ಮಹಿಳೆಯರ ಹಿಂದೆ ಓಡಾಡುತ್ತಾ ಲೈಂಗಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.
ಮಹಿಳೆಯರು ಕೆಲಸಕಾರ್ಯಗಳಿಗಾಗಿ ಗುಡ್ಡಕ್ಕೆ ತೆರಳಿದಾಗ ಅವರ ಹಿಂದೆ ಬೆತ್ತಲಾಗಿ ಬರುವುದು, ಬಹಿರ್ದೆಸೆಗೆ ಕೂತಾಗ ಮರ ಹತ್ತಿ ಇಣುಕುವುದು ಮುಂತಾದ ಕೃತ್ಯ ಮಾಡುತ್ತಿದ್ದ ಎಂದು ದೂರಲಾಗಿದೆ.
ನಿನ್ನೆ ಸಂಜೆ ಬೀಜದ ಕಾರ್ಖಾನೆಯಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ಮರಳುತ್ತಿದ್ದ ಬೋವಿ ಸಮಾಜದ ಮಹಿಳೆಯ ಮೇಲೆ ಈ ವಿಕೃತಕಾಮಿ ಏಕಾಏಕಿ ದಾಳಿ ಮಾಡಿದ್ದಾನೆ. ‘ತಾನು ಕರೆದರೆ ನೀನು ಕೇಳೋದಿಲ್ಲ ಎಂದು ಆಕೆಯ ಕೈ ಹಿಡಿದು, ಸೆರಗು ಸೆಳೆದು ಮಾರಕಾಸ್ತ್ರದಿಂದ ಆಕೆಯ ಕೊರಳನ್ನು ಕತ್ತರಿಸಲು ಪ್ರಯತ್ನಿಸಿದ್ದಾನೆ. ಮಹಿಳೆಯ ಬೊಬ್ಬೆ ಕೇಳಿ, ಅವರ ತಂಗಿ ಕೂಡಲೇ ಅಲ್ಲಿಗೆ ಓಡಿ ಬಂದಿದ್ದಾಳೆ. ಆಗ ಆತನ ಕತ್ತಿನೇಟು ಆಕೆಯ ಕೈಗೆ ಬಿದ್ದಿದೆ. ಈ ವೇಳೆ ರಕ್ಷಣೆಗೆ ಬಂದ ವೃದ್ಧರೊಬ್ಬರ ಕಾಲಿಗೂ ಕತ್ತಿಯಿಂದ ಕಡಿದಿದ್ದಾನೆ ಎಂದು ಸಂತ್ರಸ್ತ ಮಹಿಳೆಯರು ಆರೋಪಿಸಿದ್ದಾರೆ.
ಈ ಘಟನೆ ನಡೆದ ಬಳಿಕ ಆತನ ಹೆಂಡತಿ ಮಕ್ಕಳು ಕೂಡಲೇ ಆತನನ್ನು ಮನೆಯೊಳಗೆ ಕೂಡಿ ಹಾಕಿ ಬೀಗ ಹಾಕಿದ್ದಾರೆ. ಸುದ್ದಿ ತಿಳಿದ ಕಾರ್ಕಳ ಪೊಲೀಸರು ಕೂಡಲೇ ಘಟನಾ ಸ್ಥಳಕ್ಕೆ ದೌಡಾಯಿಸಿ ಆರೋಪಿಯನ್ನು ಬಂಧಿಸಿ ಕೊಲೆಯತ್ನ ಕೇಸು ದಾಖಲಿಸಿದ್ದಾರೆ.

ಹಿಂಜಾವೇ ಭೇಟಿ, ಸಾಂತ್ವನ:
ಘಟನಾ ಸ್ಥಳಕ್ಕೆ ಹಾಗೂ ಆಸ್ಪತ್ರೆಗೆ ಭೇಟಿ ನೀಡಿದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಸಂತ್ರಸ್ತ ಮಹಿಳೆಯರಿಗೆ ಧೈರ್ಯ ತುಂಬಿ ಸಾಂತ್ವನ ಹೇಳಿದ್ದಾರೆ. ಆಗ ಮಹಿಳೆಯರು ಹುಸೇನ್ ನನ್ನು ಇಲ್ಲಿಂದ ಗಡಿಪಾರು ಮಾಡಬೇಕು. ಆಗ ಮಾತ್ರ ನಮ್ಮ ಸಮುದಾಯದ ಮಹಿಳೆಯರ ಮಾನ-ಪ್ರಾಣ ಉಳಿಯಬಹುದು ಎಂದು ಕಾಲನಿಯ ಎಲ್ಲಾ ಜನರು ಒಕ್ಕೂರಲ ಬೇಡಿಕೆ ಸಲ್ಲಿಸಿದರು. ಅವರ ಬೇಡಿಕೆಯನ್ನು ಪಂಚಾಯತ್, ಪೋಲೀಸರ ಮತ್ತು ಸಚಿವರ ಗಮನಕ್ಕೆ ತರುತ್ತೇವೆ ಎಂದು ಹಿಂಜಾವೇ ಭರವಸೆ ನೀಡಿದೆ.

















