ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ಪೋಷಕ ನಟ ಸತ್ಯಜಿತ್(72) ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ಇಂದು ಮುಂಜಾನೆ ನಿಧನ ಹೊಂದಿದರು.
ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು, ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ.
ಆರೋಗ್ಯ ಸ್ಥಿತಿ ಗಂಭೀರವಾಗಿದ್ದ ಕಾರಣ ವಾರದ ಹಿಂದಷ್ಟೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ವಯೋಸಹಜ ಆರೋಗ್ಯದ ಸಮಸ್ಯೆಗಳ ಜೊತೆ 2016ರಲ್ಲಿ ಗ್ಯಾಂಗ್ರಿನ್ಗೆ ತುತ್ತಾಗಿ ಒಂದು ಕಾಲನ್ನು ಸತ್ಯಜಿತ್ ಕಳೆದುಕೊಂಡರು. ಬಳಿಕವೂ ಬೆಳ್ಳಿತೆರೆ ಮೇಲೆ ಕಾಣಿಸಿಕೊಂಡಿದ್ದರು.
ಅವರಿಗೆ ಪುತ್ರಿ ಹಾಗೂ ಪುತ್ರ ಇದ್ದಾರೆ. ಪುತ್ರಿ ವಿಮಾನಯಾನ ಸಂಸ್ಥೆಯೊಂದರಲ್ಲಿ ಉದ್ಯೋಗಿ. ಪುತ್ರ ಚಿತ್ರರಂಗದಲ್ಲಿ ತೊಡಗಿದ್ದಾರೆ.
1986ರಲ್ಲಿ ಬಿಡುಗಡೆಯಾದ ‘ಅಂಕುಶ್’ ಚಿತ್ರದ ಮೂಲಕ ಬೆಳ್ಳಿ ತೆರೆಗೆ ಕಾಲಿಟ್ಟರು. ಮುಂದೆ ಮೈಸೂರು ಜಾಣ (1992) ಅವರಿಗೆ ಚಂದನವನದಲ್ಲಿ ನೆಲೆಯೂರಲು ಬ್ರೇಕ್ ಕೊಟ್ಟ ಸಿನಿಮಾ. ‘ಪುಟ್ನಂಜ’, ‘ಶಿವಮೆಚ್ಚಿದ ಕಣ್ಣಪ್ಪ’, ‘ಚೈತ್ರದ ಪ್ರೇಮಾಂಜಲಿ’, ‘ಆಪ್ತಮಿತ್ರ’ ಚಿತ್ರದ ಪಾತ್ರಗಳಿಂದ ಹೆಚ್ಚು ಪ್ರಸಿದ್ಧಿ ಪಡೆದರು. 600ಕ್ಕೂ ಅಧಿಕ ಸಿನಿಮಾಗಳಲ್ಲಿ ಸತ್ಯಜಿತ್ ನಟಿಸಿದ್ದಾರೆ.