ಹಡಗಿನಲ್ಲಿ ಡ್ರಗ್ಸ್‌ ಪಾರ್ಟಿ: ನಟ ಶಾರುಖ್ ಖಾನ್ ಪುತ್ರ ಸಹಿತ ಎಂಟು ಮಂದಿಯ ಬಂಧನ

ಮುಂಬೈ: ಮುಂಬೈನ ತೀರ ಪ್ರದೇಶದ ಐಷಾರಾಮಿ ‘ಕ್ರೂಸ್’ ಹಡಗಿನಲ್ಲಿ ನಡೆದಿದ್ದ ಡ್ರಗ್ಸ್‌ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಶಕ್ಕೆ ಪಡೆದುಕೊಂಡಿದ್ದ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಹಾಗೂ ಇತರ ಏಳು ಮಂದಿಯನ್ನು ರಾಷ್ಟ್ರೀಯ ಮಾದಕ ವಸ್ತು ನಿಯಂತ್ರಣ ಘಟಕದ (ಎನ್‌ಸಿಬಿ) ಅಧಿಕಾರಿಗಳು ಭಾನುವಾರ ಬಂಧಿಸಿದ್ದಾರೆ.

ಆರ್ಯನ್ ಖಾನ್ ಸೇರಿದಂತೆ ಮುನ್‌ಮುನ್ ದಮೇಚಾ, ನೂಪೂರ್ ಸಾರಿಕಾ, ಇಸ್‌ಮಿತ್ ಸಿಂಗ್, ಮೋಹಕ್ ಜೆಸ್ವಾಲ್, ವಿಕ್ರಾಂತ್ ಚೊಕ್ಕರ್, ಗೋಮಿತ್ ಚೋಪ್ರಾ, ಅರ್ಬಾಜ್ ಮರ್ಚಂಟ್ ಹಾಗೂ ಇಬ್ಬರು ಯುವತಿಯರನ್ನು ಅರೆಸ್ಟ್ ಮಾಡಲಾಗಿದೆ.
ಸತತ 7 ಗಂಟೆಗಳ ವಿಚಾರಣೆ ಬಳಿಕ ಆರ್ಯನ್ ಖಾನ್ ಸೇರಿದಂತೆ ಒಟ್ಟು 8 ಮಂದಿಯನ್ನು ಅರೆಸ್ಟ್ ಮಾಡಲಾಗಿದ್ದು, ಸದ್ಯ ಮೆಡಿಕಲ್ ಚೆಕಪ್​ಗಾಗಿ ಕರೆದೊಯ್ಯಲಾಗಿದೆ.

ವೈದ್ಯಕೀಯ ಚಿಕಿತ್ಸೆಯ ನಂತರ ಬಂಧಿತರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಕೇಳುವ ಸಾಧ್ಯತೆ ಇದೆ.
ಪಾರ್ಟಿಯಲ್ಲಿ ಡ್ರಗ್ಸ್‌ ಬಳಕೆ ಮಾಡುತ್ತಿರುವ ಮಾಹಿತಿಯನ್ನು ಆಧರಿಸಿ ಶನಿವಾರ ರಾತ್ರಿ ಮಹಾರಾಷ್ಟ್ರದ ಎನ್‌ಸಿಬಿ ಅಧಿಕಾರಿಗಳು ಪ್ರಯಾಣಿಕರ ‘ಕ್ರೂಸ್‌‘ ಹಡಗಿನ ಮೇಲೆ ದಾಳಿ ನಡೆಸಿದ್ದರು. ದಾಳಿ ವೇಳೆ ಕೋಕೆನ್, ಚರಸ್, ಎಂಡಿಎಂ ಹಾಗೂ ಎಕ್‌ಸ್ಟಾಸಿ ಎಂಬ ಮಾದಕ ದ್ರವ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎನ್‌ಸಿಬಿ ತಿಳಿಸಿದೆ.

ನೂರಾರು ಮಂದಿ ಪ್ರಯಾಣಿಕರಿದ್ದ ಹಡಗು ಗೋವಾ ಕಡೆಗೆ ಸಾಗುವುದಿತ್ತು. ಹಡಗಿನಲ್ಲಿ ಪಾರ್ಟಿ ನಡೆಯುತ್ತಿರುವ ಮಾಹಿತಿಯನ್ನು ಆಧರಿಸಿ ಎನ್‌ಸಿಬಿ ಅಧಿಕಾರಿ ಸಮೀರ್‌ ವಾಂಖೆಡೆ ನೇತೃತ್ವದ ಎನ್‌ಸಿಬಿ ತಂಡವು ಹಡಗಿನಲ್ಲಿ ಶೋಧ ಕಾರ್ಯ ನಡೆಸಿದ್ದರು. ಈ ವೇಳೆ ಹಡಗಿನಲ್ಲಿ ಆರ್ಯನ್ ಖಾನ್ ಕೂಡ ಪತ್ತೆಯಾಗಿದ್ದರು.