ಉಡುಪಿ: ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ವತಿಯಿಂದ ಕೊರೊನಾದಿಂದ ಮೃತಪಟ್ಟಿರುವ, ಅಪಘಾತ, ಸಹಿತ, ಕಾಯಿಲೆಗಳಿಂದ ಮೃತಪಟ್ಟಿರುವ 154 ಅನಾಥ ಶವಗಳ ಅಂತ್ಯಸಂಸ್ಕಾರವನ್ನು ಕಾನೂನು ಪ್ರಕ್ರಿಯೆಗಳು ನಡೆದ ಬಳಿಕ, ಗೌರಯುತವಾಗಿ ನಡೆಸಲಾಗಿದೆ.
ಅಮವಾಸ್ಯೆಯ ದಿನವಾದ ಇಂದು 154 ಅನಾಥ ಆತ್ಮಗಳಿಗೆ ಸದ್ಗಗತಿ ಪ್ರಾಪ್ತಿಗಾಗಿ ಪೆರಂಪಳ್ಳಿ ಶೀಂಬ್ರಾ ಶ್ರೀಸಿದ್ಧಿವಿನಾಯಕ ದೇವಸ್ಥಾನದ ಯಾಗ ಸಭಾಂಗಣದಲ್ಲಿ ಕರಂಬಳ್ಳಿ ನಾಗರಾಜ್ ಐತಾಳ್ ಸಾರಥ್ಯದ ಪುರೋಹಿತ ಬಳಗದಿಂದ, ತಿಲಹೋಮ, ನಾರಾಯಣ ಬಲಿ ಮೊದಲಾದ ಧಾರ್ಮಿಕ ಪ್ರಕ್ರಿಯೆಗಳು ನಡೆಸಲಾಯಿತು. ಸಮಾಜಸೇವಕ ನಿತ್ಯಾನಂದ ಒಳಕಾಡು ಅವರ ಮುಂದಾಳತ್ವದಲ್ಲಿ ಎಲ್ಲಾ ಕಾರ್ಯಕ್ರಮಗಳು ಜರುಗಿದವು. ಪಿಂಡಗಳನ್ನು ಸುವರ್ಣ ನದಿಯ ಕೃಷ್ಣಾಂಗರಕ ಸ್ನಾನಘಟ್ಟದಲ್ಲಿ ಹರಿದುಬಿಡಲಾಯಿತು.
ಅಪರ ಜಿಲ್ಲಾಧಿಕಾರಿ ಬಿ. ಸದಾಶಿವ ಪ್ರಭು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ನಾಗರಿಕ ಸಮಿತಿಯವರು, ಸಾರ್ವಜನಿಕ ಸ್ಥಳದಲ್ಲಿ ನೆಲೆಕಂಡಿರುವ ನಿರ್ಗತಿಕರು, ಅನಾಥರನ್ನು ಆಸ್ಪತ್ರೆಗೆ ದಾಖಲಿಸುವ ಸೇವಾಕಾರ್ಯದಲ್ಲಿ ನಿರತವಾಗಿದೆ. ವಾರಸುದಾರರು ಇಲ್ಲದಿರುವ ಅನಾಥ ಶವಗಳಿಗೆ ಅನಾಥಪ್ರಜ್ಞೆ ಕಾಡದಂತೆ, ಬಂಧುಗಳಂತೆ ಅಂತ್ಯಸಂಸ್ಕಾರ ನಡೆಸಿದಲ್ಲದೆ, ಸದ್ಗತಿಯ ಸತ್ಕಾರ್ಯ ನಡೆಸಿರುವುದರ ಬಗ್ಗೆ, ಅಪರ ಜಿಲ್ಲಾಧಿಕಾರಿ ಅವರು, ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಠಾಣೆಯ ತನಿಖಾ ಸಹಾಯಕ ವಿಶ್ವನಾಥ್ ಶೆಟ್ಟಿ ಅಮಾಸೆಬೈಲು, ನಾಗರಿಕ ಸಮಿತಿಯ ಪದಾಧಿಕಾರಿಗಳಾದ ಮುರುಳಿಧರ್ ಬಲ್ಲಾಳ್, ಸ್ವಾತಿ. ಎಮ್ ಬಲ್ಲಾಳ್, ಲಕ್ಷ್ಮೀ ಎಮ್ ಬಲ್ಲಾಳ್, ತಾರಾನಾಥ್ ಮೇಸ್ತ ಶಿರೂರು, ಕೆ. ಬಾಲಗಂಗಾಧರ ರಾವ್, ಪಾಡಿಗಾರ್ ಮುರಳಿಧರ್ ರಾವ್, ಗಣೇಶ್ ರಾಜ್ ಸರಳಬೆಟ್ಟು, ರಾಮದಾಸ್ ಪಾಲನ್, ಸುಶೀಲಾ ರಾವ್ ಉಡುಪಿ ಮೊದಲಾದವರು ಉಪಸ್ಥಿತರಿದ್ದರು.