ಉಡುಪಿ: ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದೆ. ಆದರೆ, ಸದ್ಯ ಜಿಲ್ಲೆಯಲ್ಲಿ ದಾಖಲಾಗುತ್ತಿರುವ ಪ್ರಕರಣಗಳ ಪೈಕಿ ಮದುವೆ, ಮೆಹಂದಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದವರಲ್ಲಿ ಹಾಗೂ ಅನಗತ್ಯವಾಗಿ ತಿರುಗಾಡುತ್ತಿರುವವರಲ್ಲಿ ಸೋಂಕು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಸೋಂಕನ್ನು ನಿಯಂತ್ರಣ ಮಾಡುವ ಉದ್ದೇಶದಿಂದ ನಾಳೆಯಿಂದ (ಮೇ 25) ಜೂನ್ 7ರ ವರೆಗೆ ಮದುವೆ ಸಮಾರಂಭಗಳಿಗೆ ಅವಕಾಶ ನೀಡುವುದಿಲ್ಲ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ.
ಇಂದು ನಡೆದ ಸಭೆಯ ಬಳಿಕ ಜಿಲ್ಲೆಯಲ್ಲಿ ತೆಗೆದುಕೊಂಡ ಕ್ರಮಗಳ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿದರು.
ಇಂದಿನವರೆಗೆ (ಮೇ 24) ಮದುವೆಗೆ ಅನುಮತಿ ಪಡೆದವರು ಮಾತ್ರ ತಮ್ಮ ಮನೆಯಲ್ಲಿ ಸರಳವಾಗಿ ಮದುವೆ ಕಾರ್ಯಕ್ರಮವನ್ನು ನಡೆಸಬೇಕು. ಮದುವೆಗೆ ಅನುಮತಿ ಪಡೆದವರು ನಿಶ್ಚಿತಾರ್ಥ, ಮೆಹಂದಿ ಹಾಗೂ ಔತಣ ಕೂಟ ಕಾರ್ಯಕ್ರಮ ಆಯೋಜಿಸಿದರೆ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು. ಅಲ್ಲದೆ, ಈ ಕಾರ್ಯಕ್ರಮಗಳಲ್ಲಿ ಭಾಗವಹಿಸುವವರ ಮೇಲೂ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ಗಾಳಿ ಮಳೆಯಿಂದ ಎಲೆಕ್ಟ್ರಿಕಲ್ ವಸ್ತುಗಳು ಹಾಳಾಗಿವೆ. ಹಾಗಾಗಿ ಎಲೆಕ್ಟ್ರಿಕಲ್ ವಸ್ತುಗಳ ಖರೀದಿಗೆ ಅವಕಾಶ ಮಾಡಿಕೊಡುವಂತೆ ಹಲವರು ಮನವಿ ಮಾಡಿದ್ದಾರೆ. ಹೀಗಾಗಿ ಕೇವಲ ಎಲೆಕ್ಟ್ರಿಕಲ್ (ಎಲೆಕ್ಟ್ರಾನಿಕ್ ಅಲ್ಲ) ಅಂಗಡಿಗಳಿಗೆ ಬುಧವಾರ ಒಂದು ದಿನ ಬೆಳಿಗ್ಗೆ 6ರಿಂದ 10 ಗಂಟೆಯವರಿಗೆ ಅಂಗಡಿ ತೆರೆಯಲು ಅವಕಾಶ ನೀಡಿದ್ದೇವೆ ಎಂದರು.
ಜೂನ್ 7ರ ವರೆಗೆ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಯಾರು ಹೋಗುವಂತಿಲ್ಲ. ಯಾರಾದರೂ ಹೋದರೆ ಅಂತವರ ವಾಹನಗಳನ್ನು ವಶಕ್ಕೆ ಪಡೆದು ಕೇಸ್ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದರು.