ಉಡುಪಿ: ಇಂದಿನಿಂದ ಮೇ 24ರ ವರೆಗೆ ರಾಜ್ಯಾದಾದ್ಯಂತ ಕೋವಿಡ್ ಲಾಕ್ ಡೌನ್ ಘೋಷಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ವಾಹನ ಸಂಚಾರಕ್ಕೆ ಬಹುತೇಕ ಬ್ರೇಕ್ ಬಿದ್ದಿದ್ದು. ಹೀಗಾಗಿ ಪಡಿತರ ಖರೀದಿಸಿದವರು ಮನೆಗೆ ಸಾಗಿಸಲು ವಾಹನದ ವ್ಯವಸ್ಥೆ ಇಲ್ಲದೆ ಸಂಕಷ್ಟ ಅನುಭವಿಸುತ್ತಿದ್ದ ದೃಶ್ಯಗಳು ಉಡುಪಿ ನಗರ ಸಹಿತ ಮಣಿಪಾಲ, ಪರ್ಕಳ, ಕಟಪಾಡಿ, ಮೂಡುಬೆಳ್ಳೆ ಮೊದಲಾದ ಕಡೆ ಕಂಡುಬಂತು.
ಖರೀದಿಸಿದಂತಹ ಸುಮಾರು 40, 50 ಕಿ.ಲೋ ಪಡಿತರ ಸಾಮಗ್ರಿಗಳನ್ನು ವಾಹನವೂ ಇಲ್ಲದೆ, ಹೊತ್ತುಕೊಂಡು ಹೋಗಲು ಆಗದೆ ಮನೆಗೆ ಸಾಗಿಸಲು ಪರದಾಡುವಂತಹ ಪರಿಸ್ಥಿತಿ ಅಲ್ಲಾಲ್ಲಿ ಕಂಡುಬಂದಿದೆ.
ಮನೆ ಸಮೀಪ ಇರುವವರು ವಿಧಿ ಇಲ್ಲದೆ ತಲೆಯಲ್ಲಿ ಹೊತ್ತುಕೊಂಡು ಹೋದರೆ ಇನ್ನೂ ಕೆಲವರು ವಾಹನಕ್ಕಾಗಿ ಕಾದು ಕುಳಿತುಕೊಂಡ ದೃಶ್ಯ ಸಾಮಾನ್ಯವಾಗಿತ್ತು. ಕೆಲವು ಖರೀದಿದಾರರು ಈ ಬಗ್ಗೆ ತಮ್ಮ ಆಕ್ರೋಶವನ್ನು ಹೊರಹಾಕಿದ್ದು, ಕನಿಷ್ಠ ಎರಡು ಮೂರು ಆಟೊ ರಿಕ್ಷಾದ ವ್ಯವಸ್ಥೆಯನ್ನು ಆದರೂ ಕಲ್ಪಿಸುವಂತೆ ಆಗ್ರಹಿಸುತ್ತಿದ್ದಾರೆ.