ಸ್ಯಾಂಡಲ್ ವುಡ್ ನಿರ್ಮಾಪಕ ಕೋಟಿ ರಾಮು ಕೋವಿಡ್ ಗೆ ಬಲಿ

ಬೆಂಗಳೂರು: ಕನ್ನಡ ಚಿತ್ರರಂಗದ ಕೋಟಿ ನಿರ್ಮಾಪಕ ಎಂದೇ ಖ್ಯಾತಿ ಪಡೆದಿರುವ ನಿರ್ಮಾಪಕ ಹಿರಿಯ ನಟಿ ಮಾಲಾಶ್ರೀ ಅವರ ಪತಿ ರಾಮು ಅವರು ಕೋವಿಡ್​-19 ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ.

ಒಂದು ವಾರದ ಹಿಂದೆ ಅವರಲ್ಲಿ ಸೋಂಕು ದೃಢಪಟ್ಟಿದ್ದು, ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಎಂ.ಎಸ್​. ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಅಸುನೀಗಿದ್ದಾರೆ.

‘ರಾಜಕೀಯ’ ಸಿನಿಮಾ ಮೂಲಕ ನಿರ್ಮಾಪಕರಾದ ಅವರು ಬಳಿಕ ಗೋಲಿಬಾರ್, ಲಾಕಪ್​ ಡೆತ್ ಚಿತ್ರಗಳ ಮೂಲಕ ಯಶಸ್ಸು ಹಾಗೂ ಜನಪ್ರಿಯತೆ ಗಳಿಸಿದರು. ಕಲಾಸಿಪಾಳ್ಯ, ಸಿಬಿಐ ದುರ್ಗಾ, ಎಕೆ-47, ಹಾಲಿವುಡ್, ಮುತ್ತಿನಂಥ ಹೆಂಡ್ತಿ, ಹಲೋ ಸಿಸ್ಟರ್ ಮುಂತಾದ ಚಿತ್ರಗಳನ್ನು ಅವರು ನಿರ್ಮಾಣ ಮಾಡಿದ್ದರು. ಪ್ರಜ್ವಲ್​ ದೇವರಾಜ್​ ಅಭಿನಯದ ‘ಅರ್ಜುನ್​ ಗೌಡ’ ಚಿತ್ರಕ್ಕೆ ಅವರು ಬಂಡವಾಳ ಹೂಡಿದ್ದು, ಅದು ನಿರ್ಮಾಣ ಹಂತದಲ್ಲಿ ಇರುವಾಗಲೇ ಅವರು ಇಹಲೋಕ ತ್ಯಜಿಸಿದ್ದಾರೆ.